ಕುಶಾಲನಗರ, ಆ. 30: ಸರಕಾರಿ ಉದ್ಯೋಗದಲ್ಲಿ ಕನ್ನಡ ಭಾಷೆಗೆ ಪ್ರಥಮ ಪ್ರಾಶಸ್ತ್ಯ ನೀಡುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶಿರಂಗಾಲ ಗ್ರಾಮದಲ್ಲಿ ನಡೆದ ಮುಂಗಾರು ಸಂಪದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.ರಾಜ್ಯದ ಐಎಎಸ್, ಐಪಿಎಸ್ ಅಧಿಕಾರಿಗಳ ಸಂಖ್ಯೆಯಲ್ಲಿ ಶೇ.50 ರಷ್ಟು ಕಡಿತಗೊಳಿಸಿ ಆ ಸ್ಥಾನಗಳನ್ನು ಅರ್ಹ ಕನ್ನಡಿಗರನ್ನು ಭರ್ತಿಗೊಳಿಸುವ ಮೂಲಕ ಭಾಷೆಗೆ ಒತ್ತು ನೀಡಬೇಕಾಗಿದೆ. ಈ ಮೂಲಕ ಸೊರಗುತ್ತಿರುವ ಕನ್ನಡ ಭಾಷೆಗೆ ಮರುಜೀವ ಕಲ್ಪಿಸಲು ಸಾಧ್ಯ ಎಂದು ಪ್ರಸಾದ್ ಆಗ್ರಹಿಸಿದರು. ಆಧುನಿಕ ಅಭಿವೃದ್ಧಿ ಅವಾಂತರದಲ್ಲಿ ಪ್ರತಿಯೊಬ್ಬ ಕನ್ನಡಿಗ ಬಾಲ್ಯದ ಬದುಕನ್ನು ಮರೆಯುವಂತಾಗಿರುವದು ವಿಷಾದನೀಯ ಎಂದ ಅವರು, ಗ್ರಾಮೀಣ ಮಕ್ಕಳ ಸಾಮಥ್ರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮೂಲಕ ವೇದಿಕೆ ಕಲ್ಪಿಸಲಾಗುವದು ಎಂದರು.

ಕನ್ನಡ ಭಾಷೆ ಕಟ್ಟುವ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಸಂಘ-ಸಂಸ್ಥೆಗಳ ಸಹಯೋಗ ದೊರಕಿದಲ್ಲಿ ಕನ್ನಡಕ್ಕೆ ಎದುರಾಗಿರುವ ಕೊರತೆ ನೀಗಿಸಲು ಸಾಧ್ಯ ಎಂದರು.

ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಪರಿಷತ್ ಮೂಲಕ ಸಾಹಿತ್ಯ ಲೋಕಕ್ಕೆ ಅನ್ನದಾತರ ಕೊಡುಗೆ ಮತ್ತು ಗ್ರಾಮೀಣ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಕನ್ನಡ ಭಾಷೆ ಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಾಷೆಯ ಉಳಿವು ಸಾಧ್ಯ ಎಂದರು. ಸರಕಾರದ ಮೂಲಕ ಭಾಷೆ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ರೂಪುಗೊಳ್ಳಬೇಕಾಗಿದೆ ಎಂದ ಶಾಸಕರು, ಕೇವಲ ಸುತ್ತೋಲೆಗಳ ಮೂಲಕ ಭಾಷೆಯ ಉಳಿವು ಅಸಾಧ್ಯ ಎಂದರಲ್ಲದೆ ಪ್ರತಿಯೊಬ್ಬರಲ್ಲಿ ಭಾಷೆಯ ಬಗ್ಗೆ ಅರಿವು, ಜಾಗೃತಿ ಮೂಡ ಬೇಕಾಗಿದೆ ಎಂದು ತಿಳಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಅನ್ನದಾತ ನಿಂದ ಕಲೆ, ಸಾಹಿತ್ಯ ಸೃಷ್ಟಿಯಾಗಿದ್ದು, ಕೃಷಿಗೆ ಸಂಬಂಧಿಸಿದ ಸಾಹಿತ್ಯಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದರು. ಕೊಡವ ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ಕೈ ಜೋಡಿಸುವ ಭರವಸೆ ನೀಡಿದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಎಲ್ಲಾ ಭಾಷಾ ಅಕಾಡೆಮಿಗಳು ಕನ್ನಡದಲ್ಲೇ ವ್ಯವಹರಿಸುತ್ತಿದ್ದು, ಈ ಮೂಲಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದಲ್ಲಿ ಒಟ್ಟಾಗಿ ಕನ್ನಡದ ಏಳಿಗೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಜನಪದ ಪರಿಷತ್‍ನ ಕೊಡಗು ಜಿಲ್ಲಾಧ್ಯಕ ಬಿ.ಜಿ. ಅನಂತಶಯನ ಅವರು ಮಾತನಾಡಿ, ನಶಿಸಿ ಹೋಗುತ್ತಿರುವ ಕಲೆಗಳು, ಸಾಹಿತ್ಯದ ಬಗ್ಗೆ ಜನರು ಭ್ರಮೆಯಿಂದ ಹೊರಬರುವ ಮೂಲಕ ಎಚ್ಚೆತ್ತುಕೊಳ್ಳ ಬೇಕಾಗಿದೆ ಎಂದರು. ಕೊಡಗು ಜಾನಪದ ಪರಿಷತ್ ಮೂಲಕ ಜಿಲ್ಲೆಯ ಗ್ರಾಮೀಣ ಕ್ರೀಡೆಗಳು, ಜನಪದೀಯ ಸಾಂಸ್ಕøತಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಕಾರ್ಯಕ್ರಮ ಗಳನ್ನು ರೂಪಿಸಲಾಗು ವದು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಆಶಯ ನುಡಿಗಳನ್ನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತ ಕುಟುಂಬಗಳ ನಡುವೆ ಸಾಹಿತ್ಯದ ಕಂಪನ್ನು ಬೀರುವ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳ ಲಾಗಿದೆ. ಆಧುನಿಕತೆಯ ಹೆಸರಿನಲ್ಲಿ ಸೃಷ್ಟಿ ಯಾಗಿರುವ ಸಾಹಿತ್ಯದ ಕೊರತೆಯನ್ನು ನೀಗಿಸುವ ಪ್ರಯತ್ನ ಇದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಸಿ. ರಘು, ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ, ಕಸಾಪ ಹೋಬಳಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಕ್ಷೇತ್ರ ಶಿಕ್ಷಣಾದಿ üಕಾರಿ ಮಲ್ಲೆಸ್ವಾಮಿ, ಸೋಮವಾರಪೇಟೆ ತಾಲೂಕು ಜನಪದ ಪರಿಷತ್ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಹೆಚ್.ಜೆ. ಜವರಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಇದ್ದರು.

ಮಡಿಕೇರಿಯ ಶೋಭಾ ಸುಬ್ಬಯ್ಯ ಅವರ ‘ಡಮರು’ ಪುಸ್ತಕವನ್ನು ಡಾ. ನಲ್ಲೂರು ಪ್ರಸಾದ್ ಬಿಡುಗಡೆಗೊಳಿಸಿ ದರು. ಈ ಸಂದರ್ಭ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಗಳಾದ ಡಾ.ಸುಭಾಷ್ ನಾಣಯ್ಯ, ಕೆ.ಎಸ್. ರಮೇಶ್, ಕೋಶಾಧಿಕಾರಿ ಎಸ್.ಎ. ಮುರಳೀಧರ್, ಪದಾಧಿಕಾರಿ ಗಳಾದ ಅಶ್ವಥ್‍ಕುಮಾರ್, ಫಿಲಿಪ್‍ವಾಸ್, ನಂಜುಂಡಸ್ವಾಮಿ, ಕೆ.ಕೆ. ನಾಗರಾಜಶೆಟ್ಟಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಮತ್ತು ಶಿರಂಗಾಲ ಗ್ರಾಮಸ್ಥರು ಇದ್ದರು. ಕಾರ್ಯಕ್ರಮದಲ್ಲಿ ನಾಡಗೀತೆ ಮತ್ತು ರೈತಗೀತೆ ಹಾಡಲಾಯಿತು.

ಸೋಮವಾರಪೇಟೆ ತಾಲೂಕು ಗೌರವ ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್ ಸ್ವಾಗತಿಸಿದರು, ಶಿಕ್ಷಕ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.