ಮಡಿಕೇರಿ, ಮೇ 23: ಇಂದಿನ ರಾಜಕೀಯ ಪಕ್ಷಗಳು ಹಾಗೂ ಆಡಳಿತ ನಡೆಸುತ್ತಿರುವ ಸರಕಾರಗಳು, ಜನರ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಮೂಲಭೂತ ಅವಶ್ಯಕತೆಗಳ ಬಗ್ಗೆ ಕಾಳಜಿ ವಹಿಸದೆ ಧರ್ಮ-ಧರ್ಮಗಳ ನಡುವೆ ಮತ್ತು ಜಾತಿ-ಜಾತಿಗಳ ನಡುವೆ ಕೋಮು ದ್ವೇಷÀವನ್ನು ಸೃಷ್ಟಿಸಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.

ಮಡಿಕೇರಿಯ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಅವರು, ಸರಕಾರಗಳು ದೇಶದ ಅಭಿವೃದ್ಧಿಯ ಅಜೆಂಡಾವನ್ನು ಬಿಟ್ಟು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿರುವದು ಪ್ರಜಾಪ್ರಭುತ್ವದ ದುರಂತ ಎಂದು ವಿಶ್ಲೇಷಿಸಿದರು. ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳ ಈ ಅಪಾಯಕಾರಿ ನಿಲುವಿನಿಂದ ಈ ದೇಶವನ್ನು ಕಾಪಾಡಬೇಕಾದ ಹೊಣೆ ಎಸ್‍ಡಿಪಿಐ ಕಾರ್ಯಕರ್ತರ ಮೇಲಿದೆ. ಈ ದೇಶವನ್ನು ಭ್ರಷ್ಟಾಚಾರ ಮುಕ್ತ, ಹಸಿವು ಮುಕ್ತ ಹಾಗೂ ಭಯ ಮುಕ್ತ ದೇಶವನ್ನಾಗಿ ಕಟ್ಟುವ ಪಕ್ಷದ ಗುರಿಗೆ ಕಾರ್ಯಕರ್ತರು ಕೈಜೋಡಿಸಬೇಕೆಂದು ಕರೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪಕ್ಷದ ಧ್ವಜಾರೋಹಣ ಮಾಡುವದರ ಮೂಲಕ ಚಾಲನೆ ನೀಡಿದರು.

ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಫಲಾನುಭವಿಗಳಿಗೆ ಸರಕಾರದ ಯೋಜನೆಗಳು ತಲಪುತ್ತಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಮತ್ತು ಬಿಜೆಪಿಯ ಶಾಸಕರುಗಳು ಹಾಗೂ ಸಂಸದರು ಕಾಳಜಿವಹಿಸುತ್ತಿಲ್ಲ ಎಂದು ವಿಷಾಧÀ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಸಮಿತಿಯ ಒಂದು ವರ್ಷದ ವಾರ್ಷಿಕ ಅವಲೋಕನ ನಡೆಯಿತು. ಎಸ್‍ಡಿಪಿಐ ಪಕ್ಷದ ಚುನಾಯಿತ ಪ್ರತಿನಿಧಿಗಳು ತಮ್ಮ ವಾರ್ಡ್‍ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ವರದಿ ಮಂಡಿಸಿದರು. ಜಿಲ್ಲಾ ಪ್ರತಿನಿಧಿ ಸಭೆಯು ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸರಕಾರದ ಮುಂದೆ ಹಕ್ಕೊತ್ತಾಯಗಳನ್ನು ಸಲ್ಲಿಸಲಾಯಿತು.

ಸಭೆಯಲ್ಲಿ ನಗರ ಸಭೆ ಸದಸ್ಯ ಪೀಟರ್, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ, ವುಮೆನ್ಸ್ ಇಂಡಿಯಾ ಮೂವ್‍ಮೆಂಟ್‍ನ ಜಿಲ್ಲಾಧ್ಯಕ್ಷೆ ನಾಗರತ್ನ ಮುಂತಾದವರು ಉಪಸ್ಥಿತರಿದ್ದರು.