*ಗೋಣಿಕೊಪ್ಪಲು, ಜ. 16: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಬರ ಪರಿಹಾರದ ಹಣ ರೂ 1772 ಕೋಟಿಯನ್ನು ಮೊದಲು ರಾಜ್ಯ ಸರ್ಕಾರ ಕೃಷಿಕರಿಗೆ ನೀಡಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು.
ಬಿಜೆಪಿಯಿಂದ ಕೈಗೊಂಡಿರುವ ಬರ ಪರೀಶೀನಲಾ ಸಮಿತಿ ವತಿಯಿಂದ ಸೋಮವಾರ ತಿತಿತಿಮತಿ ಸಮೀಪದ ಚೇಣಿ ಹಡ್ಲು, ಜಂಗಲ್ ಹಾಡಿ ಮೊದಲಾದ ಭಾಗಗಳಿಗೆ ಭೇಡಿ ನೀಡಿದ ಬಳಿ ಗೋಣಿಕೊಪ್ಪಲಿನ ಆರ್ಎಂಸಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ರೂ 1550 ಕೋಟಿ ಹಣವನ್ನ ಖರ್ಚು ಮಾಡದೆ ಹಿಂದಕ್ಕೆ ಕಳಿಸಿದೆ. ಈ ಹಣವನು ವೆಚ್ಚಮಾಡದಿರುವದರ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮಡಿಕೇರಿಯ ಕೋಟೆಯಲ್ಲಿ ಕುಳಿತುಕೊಂಡು ಜಿಲ್ಲೆಯಲ್ಲಿ ಯಾವದೇ ಸಮಸ್ಯೆ ಇಲ್ಲ ಎಂದು ಸರ್ಕಾರಕ್ಕೆ ವರದಿ ನೀಡುತ್ತಾರೆ. ಆದರೆ ಹಾಡಿಗಳಲ್ಲಿ ಜನತೆಗೆ ಕುಡಿಯುವ ನೀರಿಲ್ಲ. ಬರ ಮತ್ತು ಕಾಡಾನೆ ಕಾಟದಿಂದ ಶೇ.100ರಷ್ಟು ಬೆಳೆಹಾನಿಯಾಗಿದೆ. ಹೊಳೆಗಳು ಬತ್ತಿ ಹೋಗಿವೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು 102 ಗ್ರಾಮ ಪಂಚಾಯಿತಿಗಳಿಗೆ ರೂ 25ಲಕ್ಷ ಹಣ ನೀಡಿ ಸರ್ಕಾರ ಕೈತೊಳೆದುಕೊಂಡಿದೆ ಎಂದು ದೂರಿದರು.
ಕೊಡಗಿನಲ್ಲಿ ಈ ಬಾರಿ ಡಿಸೆಂಬರ್ ನಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದರೂ ಸರ್ಕಾರ ಇನ್ನೂ ಕೂಡ ಗ್ರಾಮ ಪಂಚಾಯಿತಿಗಳಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ವರದಿ ತರಿಸಿಕೊಂಡಿಲ್ಲ. ಬರ ಸಮಸ್ಯೆ ಪರಿಹರಿಸುವಲ್ಲಿ ನಿರ್ಲಕ್ಷ್ಯತೋರುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ತೇಜಶ್ವಿನಿ ಗೌಡ, ವಕ್ತಾರ ನಾರಾಯಣಸ್ವಾಮಿ, ಹಿಂದುಳಿದ ಮೋರ್ಚಾದ ಅಧ್ಯಕ್ಷ ಪುಟ್ಟಸ್ವಾಮಿ, ವಿಭಾಗೀಯ ಸಂಚಾಲಕ ನಾಗೇಂದ್ರ, ಶಾಸಕ ಕೆ.ಜಿ. ಬೋಪಯ್ಯ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮನು ಮುತ್ತಪ್ಪ, ತಾಲೂಕು ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ಸದಸ್ಯರಾದ ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ ಹಾಜರಿದ್ದರು.
ಚಿತ್ರ,ವರದಿ: ಎನ್.ಎನ್. ದಿನೇಶ್