ಕುಶಾಲನಗರ, ಡಿ. 17: ಸಂಘಸಂಸ್ಥೆಗಳು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತುವ ನೀಡುವ ಮೂಲಕ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಕುಶಾಲನಗರ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಬಿ.ಎಲ್. ಸತ್ಯನಾರಾಯಣ ಹೇಳಿದರು.ಕುಶಾಲನಗರದ ವಾಸವಿ ಯುವತಿಯರ ಸಂಘದ ಆಶ್ರಯದಲ್ಲಿ ಸ್ಥಳೀಯ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಿಚನ್ ಕ್ವೀನ್ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಾಸವಿ ಯುವತಿಯರ ಸಂಘ ಶಿಕ್ಷಣ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿರುವದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಸೋಲು ಗೆಲುವಿನ ಲೆಕ್ಕಾಚಾರ ಬದಿಗೊತ್ತಿ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿದೆ. ಶ್ರದ್ಧೆ, ಭಕ್ತಿಯೊಂದಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಯ ಮನೋಭಾವ ಬೆಳೆಸಿಕೊಳ್ಳಬೇಕಿದೆ.

ಗೃಹಿಣಿಯರು ಆಹಾರ ಅಪವ್ಯಯವಾಗದಂತೆ ಕಾಳಜಿ ವಹಿಸುವದರೊಂದಿಗೆ ಫಾಸ್ಟ್ ಫುಡ್, ಜಂಕ್ ಫುಡ್, ಸಂಸ್ಕರಿತ ಆಹಾರಗಳಿಗೆ ಮಾರುಹೋಗದೆ ಆರೋಗ್ಯ ವರ್ಧಕ ಆಹಾರ ಪದ್ಧತಿ ಮೂಲಕ ಕುಟುಂಬದ ಆರೋಗ್ಯ ಕಾಪಾಡಬೇಕಿದೆ ಎಂದರು.

ವಾಸವಿ ಯುವಜನ ಸಂಘದ ಅಧ್ಯಕ್ಷರಾದ ವಿ.ಆರ್.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕರಾದ ಎಸ್.ಎನ್. ನರಸಿಂಹಮೂರ್ತಿ, ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಆಶಾ ಅಶೋಕ್, ಯುವತಿಯರ ಸಂಘದ ಸಲಹಾ ಸಮಿತಿ ಸದಸ್ಯೆ ರಶ್ಮಿ ಸಂಜಯ್, ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ರವಿಕುಮಾರ್, ಕನ್ನಿಕಾ ವಿವಿದೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ಅಮೃತ್‍ರಾಜ್ ಇದ್ದರು.

ಸ್ಪರ್ಧೆಯಲ್ಲಿ 70 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಹೋಳಿಗೆ, ಪುದೀನಾ ರೈಸ್, ಬಾದಾಮ್ ಬರ್ಫಿ, ಕೊಬ್ಬರಿ ಮಿಠಾಯಿ, ಬಿಸಿಬೇಳೆ ಬಾತ್, ರಾಗಿ ರೊಟ್ಟಿ, ಪಾಯಸ, ಓಟ್ಸ್ ಹಲ್ವ, ಕೊರ್ಲೆ ಪುದೀನ ಪಲಾವ್, ಓಟ್ಸ್ ಬನಾನ ಬ್ರೆಡ್, ನಿಂಬೆ ಚಿತ್ರನ್ನಾ ಸೇರಿದಂತೆ ರಾಗಿ, ನವಣೆ, ಸಾಮೆ ಅಕ್ಕಿಯ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದರು. ತೀರ್ಪುಗಾರರಾಗಿ ವೀಣಾ ಪ್ರಮೋದ್, ಆಶಾ ರವಿಕುಮಾರ್ ಕಾರ್ಯನಿರ್ವಹಿಸಿದರು.

ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ರಶ್ಮಿ ಅಮೃತ್‍ರಾಜ್ ಪ್ರಾಸ್ತಾವಿಕ ನುಡಿಗಳಾಡಿದರು, ಕುಸುಮ ಎಸ್.ರಾಜ್ ಸ್ವಾಗತಿಸಿದರು, ಪತ್ರಕರ್ತೆ ಸಿಂಚನಾ ಚಂದ್ರಮೋಹನ್ ನಿರೂಪಿಸಿದರು, ಕಾರ್ಯದರ್ಶಿ ಶಿಲ್ಪಾ ಪ್ರಶಾಂತ್ ವಂದಿಸಿದರು.