ಮಡಿಕೇರಿ, ಡಿ. 16: ಹಿರಿಯ ಸಹಕಾರಿ, ಸಮಾಜ ಸೇವಕ ಹಾಗೂ ಕೊಡುಗೈ ಧಾನಿಯಾಗಿದ್ದ ಕೊಡ್ಲಿಪೇಟೆಯ ಹೆಚ್.ಎಸ್. ಗಿರೀಶ್ ಅವರು ಇಂದು ಮುಂಜಾನೆ ನಿಧನರಾದರು.ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ 1962 ರಿಂದ ಸೇವೆ ಸಲ್ಲಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ 78 ವರ್ಷ ಪ್ರಾಯದ ಗಿರೀಶ್ ಅವರು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ನಿರ್ದೇಶಕರಾಗಿದ್ದರು. ವಿದ್ಯಾಸಂಸ್ಥೆಯ ನೂತನ ಕಟ್ಟಡಕ್ಕೆ ಅವರ ಕುಟುಂಬ ಸುಮಾರು 30 ಲಕ್ಷಕ್ಕೂ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸಿತ್ತು.ಕೊಡಗಿನ ಖೈದಿಗಳು ಜೈಲಿನಿಂದ ಬಿಡುಗಡೆಗೊಂಡ ಸಂದರ್ಭದಲ್ಲಿ ಹಣ ಪಾವತಿಸಲಾಗದ ಪರಿಸ್ಥಿತಿ ಕಂಡು ಸುಮಾರು 50 ಸಾವಿರ ರೂಪಾಯಿ ಪಾವತಿಸಿದ ಶ್ರೀಯುತರು ಅದರ ಗೌರವವನ್ನು ಚೇಂಬರ್‍ಗೆ ಸಲ್ಲಿಸಿದ್ದರು.ಹಿಂದೆ ಇದ್ದ ಕೊಡ್ಲಿಪೇಟೆ ಸಿ.ಎಂ.ಸಿ.ಯಲ್ಲೂ ಜನಪ್ರತಿನಿಧಿ ಯಾಗಿದ್ದ ಗಿರೀಶ್ ವಿ.ಎಸ್.ಎಸ್.ಎನ್., ಎ.ಪಿ.ಸಿ.ಎಂ.ಎಸ್, ಮೈಸೂರಿನ ಎಂ.ಸಿ.ಪಿ.ಸಿ.ಎಸ್., ಕೊಡ್ಲಿಪೇಟೆಯ ವೀರಶೈವ ಸಮಾಜದ ಅಧ್ಯಕ್ಷರಾಗಿ ಕೊಡುಗೆ ನೀಡಿದ್ದರು. ಕಳೆದ 2 ವರ್ಷಗಳಲ್ಲಿ ಕೊಡ್ಲಿಪೇಟೆಯಲ್ಲಿ 4 ಬಾರಿ ಆರೋಗ್ಯ ಶಿಬಿರ ನಡೆಸಿ ಬಡವರ ಆರೋಗ್ಯಕ್ಕೆ ನೆರವಾಗಿದ್ದರು. ಕೊಡ್ಲಿಪೇಟೆಯಂತ ಸಣ್ಣ ಪಟ್ಟಣದಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ ನಡೆಸಿ ಯಶಸ್ಸು ಸಾಧಿಸಿದ್ದರು. ಶಿಸ್ತು ಹಾಗೂ ಸಮಯ ಪಾಲನೆಯಿಂದಾಗಿ ಇಳಿ ವಯಸ್ಸಿನಲ್ಲೂ, ಸಮಾಜ ಸೇವಾ ಕಾರ್ಯಗಳಲ್ಲಿ ಯಶಸ್ಸು ಕಂಡಿದ್ದರು.

(ಮೊದಲ ಪುಟದಿಂದ) ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನಲ್ಲಿ ವರ್ತಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವಂತೆ ಒತ್ತಾಯಿಸಿ ರೂ. 50 ಸಾವಿರ ದೇಣಿಗೆಯನ್ನು ನೀಡಿದ್ದ ಶ್ರೀಯುತರು ಚೇಂಬರ್ ಬ್ಯಾಂಕ್ ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ರಾಜ್ಯದ ಹಿರಿಯ ವಕೀಲ ಹೆಚ್.ಎಂ. ಚಂದ್ರಮೌಳಿ ಅವರ ಸಹೋದರರಾಗಿದ್ದ ಗಿರೀಶ್ ಅವರ ಅಂತಿಮ ದರ್ಶನಕ್ಕೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಗಮಿಸಿದ್ದರು. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ನಿಯೋಗ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅವರ ನೇತೃತ್ವದಲ್ಲಿ ಕೊಡ್ಲಿಪೇಟೆಗೆ ತೆರಳಿ ಅಂತಿಮ ನಮನ ಸಲ್ಲಿಸಿತು.

ಮೃತರು ಪತ್ನಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ಸಂಜೆ ನೆರವೇರಿತು.

ಕಾಲೇಜನ್ನು ಆರಂಭಿಸಿದ್ದು, ಈ ವಿದ್ಯಾಸಂಸ್ಥೆಯ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಗಣ್ಯರ ಸಂತಾಪ: ಶ್ರೀಯುತರ ನಿಧನಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ. ರಾಜೇಂದ್ರ, ಕೆ.ಬಿ. ಗಿರೀಶ್ ಗಣಪತಿ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಕಾರ್ಯದರ್ಶಿ ಜಿ.ಎಂ. ಕಾಂತರಾಜು, ತಾಲೂಕು ಅಧ್ಯಕ್ಷ ಸಿ.ವಿ. ವಿಶ್ವನಾಥ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಸೇರಿದಂತೆ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ.