ಕುಶಾಲನಗರ, ಜ. 4: ಜೀವನದಲ್ಲಿ ಪ್ರತಿ ಕ್ಷಣಗಳು ಅತ್ಯಮೂಲ್ಯವಾಗಿದ್ದು, ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಹೊಟೇಲ್ ನಕ್ಷತ್ರ ಸಭಾಂಗಣದಲ್ಲಿ ಕರ್ನಾಟಕ ಕಾವಲುಪಡೆಯ 2017 ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಮಯ ವನ್ನು ಗೌರವಿಸುವ ಮೂಲಕ ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕಿದೆ. ದೊರೆಯುವ ಪ್ರತೀ ಕ್ಷಣಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದರು.
ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ಮಾತನಾಡಿ, ಪ್ರತಿ ದಿನವನ್ನು ಹೊಸ ಉತ್ಸಾಹದೊಂದಿಗೆ ಬರಮಾಡಿ ಕೊಳ್ಳಬೇಕಿದೆ. ಆ ಮೂಲಕ ಹಿಂದಿನ ಅಹಿತಕರ ಘಟನೆಗಳನ್ನು ಮರೆಯಲು ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಮಾತನಾಡಿದರು. ಈ ಸಂದರ್ಭ ಕರ್ನಾಟಕ ಕಾವಲು ಪಡೆಯ ಜಿಲ್ಲಾ ಕಾರ್ಯದರ್ಶಿಯಾಗಿ ನೆಲ್ಲಿಹುದಿ ಕೇರಿಯ ಗ್ರಾ.ಪಂ. ಸದಸ್ಯ ವಿ.ಜಿ. ಯೋಗೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಆರ್. ಮಂಜುನಾಥ್ ಅವರನ್ನು ನೇಮಕ ಗೊಳಿಸಲಾಯಿತು. ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಆರ್ಯುವೇದ ವೈದ್ಯ ಡಾ. ಉದಯಕುಮಾರ್, ಕಾವಲುಪಡೆ ಜಿಲ್ಲಾ ಉಪಾಧ್ಯಕ್ಷ ರಂಗಸ್ವಾಮಿ ಗೌಡ, ಬಾರವಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ಉದ್ಯಮಿ ಬಾಲು ಮತ್ತಿತರರು ಇದ್ದರು.