ಮಡಿಕೇರಿ, ಆ. 20: ಮೂರು ತಿಂಗಳಿಗೊಮ್ಮೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯುತ್ತಿದ್ದು, ಸಮಿತಿ ಕೈಗೊಂಡ ಸಭಾ ನಿರ್ಣಯವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು ಎಂದು ಸಮಿತಿ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್‍ಸಿಂಹ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ನಿರ್ದೇಶನ ನೀಡಿದರು.

ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಸಮಿತಿಯ ಸಭೆ ನಡೆಯುತ್ತಿದೆ. ಆದರೆ ಕಳೆದ ಅನೇಕ ಸಭೆಗಳಲ್ಲಿ ಕೈಗೊಂಡ ನಿರ್ಣಯ ಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ನಿರೀಕ್ಷಿತ ಸಹಕಾರ ನೀಡುತ್ತಿಲ್ಲ ಎಂದು ಸಂಸದ ಪ್ರತಾಪ್‍ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.

ಸಮಗ್ರ ಗಿರಿಜನ ಯೋಜನೆಯಡಿ ಯಲ್ಲಿ ಜಿಲ್ಲೆಯಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಐಟಿಡಿಪಿ ಅಧಿಕಾರಿ ಯನ್ನು ಪ್ರಶ್ನಿಸಿದರು. ಐಟಿಡಿಪಿ ಅಧಿಕಾರಿ ಕೆ.ವಿ. ಸುರೇಶ್ ಮಾತನಾಡಿ ಜಿಲ್ಲೆಯಲ್ಲಿ 300 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಉತ್ತರಿಸಿದರು. ಈ ಸಂದರ್ಭ ಜಿಲ್ಲೆಯ ಎಲ್ಲೆಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂಬದಾಗಿ ಸಂಪೂರ್ಣ ಮಾಹಿತಿ ನೀಡುವಂತೆ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು. ಈ ಸಂದರ್ಭ ಮಾಹಿತಿ ನೀಡಲು ಅಧಿಕಾರಿ ತಡಕಾಡಿದರು. ಇಲಾಖೆಯ ವೀರಾಜಪೇಟೆ ತಾಲೂಕು ಅಧಿಕಾರಿ ಮಾತನಾಡಿ ಅರಣ್ಯ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಮನೆ ನಿರ್ಮಿಸಲು ಅನುಮತಿ ನೀಡುತ್ತಿಲ್ಲ ಎಂದು ಹೇಳಿದರು. ಕೇಂದ್ರ ಅರಣ್ಯ ಸಚಿವರು ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಅಡ್ಡಿಪಡಿಸುವದು ಸರಿಯಲ್ಲ ಎಂಬ ಸುತ್ತೋಲೆಯನ್ನು ಹೊರಡಿಸಿದೆ. ತಡೆ ಒಡ್ಡುವದು ಸರಿಯಲ್ಲ. ನನ್ನ ಬಳಿ ಸುತ್ತೋಲೆಯ ಪ್ರತಿ ಇದೆ. ಅದನ್ನು ಪರಿಶೀಲಿಸಿ ಎಂದು ಸಿಇಓ ಸೇರಿದಂತೆ ಅರಣ್ಯಾಧಿಕಾರಿಗಳು ಹಾಗೂ ಐಟಿಡಿಪಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ ಸರ್ಕಾರದ ಕೆಲಸ ದೇವರ ಕೆಲಸ ಅಂತೀರಿ. ಸರ್ಕಾರಿ ಅಧಿಕಾರಿ ಗಳಾದ ನೀವುಗಳು ಒಬ್ಬರನ್ನು ಮತ್ತೊಬ್ಬರನ್ನು ದೂರುವದು ಸರಿಯಲ್ಲ. ಇದೇನು ಕಳ್ಳ- ಪೊಲೀಸ್ ಆಟವೇ ಎಂದು ಪ್ರಶ್ನಿಸಿದರು. ಜಿ.ಪಂ. ಸಭೆಯಲ್ಲಿ ಇದನ್ನೆಲ್ಲ ಪ್ರಶ್ನಿಸುವಂತೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರಿಗೆ ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು. ಕೇಂದ್ರ ಸರ್ಕಾರ ಮತ್ತು ಸಂಸದರ ನಿಧಿಯಿಂದ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವ ಸೌಲಭ್ಯವಿದ್ದು, ಈ ಬಗ್ಗೆ ಜಿಲ್ಲೆಯಲ್ಲಿ ಅವಶ್ಯಕತೆಯಿ ರುವವರನ್ನು ಗುರುತಿಸುವಂತೆ ವಿಕಲಚೇತನರ ಕಲ್ಯಾಣಾಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಸೂಚಿಸಿದರು. ಜಿಲ್ಲೆಯಲ್ಲಿ ಆರು ಪುಂಡಾನೆಗಳನ್ನು ಹಿಡಿಯಲು ಇಲಾಖೆ ಮನವಿ ಮಾಡಿದ್ದು, ರಾಜ್ಯ ಸರ್ಕಾರದಿಂದ ಅನುಮತಿ ದೊರೆಯುವ ಸಾಧ್ಯತೆಯಿದೆ ಎಂದು ಅರಣ್ಯಾಧಿಕಾರಿ ಏಡುಕೊಂಡಲು ಆನೆ ಹಾವಳಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ತಲಕಾವೇರಿಯಲ್ಲಿ ಶನಿವಾರ, ಭಾನುವಾರದಂದು ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಇನ್ನಷ್ಟು ಹೆಚ್ಚಿನ ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಸಮಿತಿ ಸದಸ್ಯ ಮನುಮುತ್ತಪ್ಪ ಆಗ್ರಹಿಸಿದರು. ದೇವಸ್ಥಾನದ ಭಂಡಾರದ ಹಣದಲ್ಲೇ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳಿಗೆ ಶಾಸಕ ಬೋಪಯ್ಯ ಹೇಳಿದರು.

ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಎರಡು ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳಿವೆ. ಅಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆಯೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಿಎಸ್‍ಎನ್‍ಎಲ್ ದೂರವಾಣಿ ಸಂಪರ್ಕ ಕಲ್ಪಿಸುವಂತೆ ಸಮಿತಿ ಸದಸ್ಯ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಆಗ್ರಹಿಸಿದರು.

ಕೇಂದ್ರ ಸರ್ಕಾರದ ಮುದ್ರಾ ಹಾಗೂ ಜೀವ ವಿಮಾ ಯೋಜನೆ ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬ್ಯಾಂಕ್‍ಗಳು ವಿಫಲವಾಗಿವೆ ಬ್ಯಾಂಕ್‍ಗಳು ಸಹಕಾರ ನೀಡುತ್ತಿಲ್ಲ ಎಂದು ಶಾಸಕ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕನ್ನಡ ಭಾಷೆಯ ಜ್ಞಾನವಿಲ್ಲದೆ ಸಮಸ್ಯೆಯಾಗಿದೆ. ಸರಿಪಡಿಸಲಾಗುವದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಳಿಸಿದರು.

ಬ್ಯಾಂಕ್‍ಗಳಲ್ಲಿ ಕನ್ನಡ ಭಾಷೆಯ ಕಾರ್ಯಾಗಾರ ಮಾಡುವಂತೆ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯಲ್ಲಿ ಜಿ.ಪಂ. ಅಧ್ಯಕ್ಷರು, ತಾ.ಪಂ. ಅಧ್ಯಕ್ಷರು, ಗ್ರಾ.ಪಂ. ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಎಲ್ಲರೂ ಭಾಗಿಯಾದಾಗ ಅಭಿವೃದ್ಧಿಯ ಅನುಷ್ಠಾನ ಸಾಧ್ಯ. ಅಧಿಕಾರಿಗಳು ಸಮಿತಿಯ ಸದಸ್ಯರ ಮನವಿಗಳಿಗೆ ಸ್ಪಂದಿಸುವಂತೆ ಸೂಚಿಸಿದ ಪ್ರತಾಪ್ ಸಿಂಹ, ಸ್ಪಂದಿಸದಿದ್ದಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸೂಚಿಸಿದರು. ಇಂದಿನ ಸಭೆಗೆ ಆಗಮಿಸದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಕಾರ್ಯನಿರ್ವಹಣಾ ಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಸಿಇಓ ಚಾರುಲತಾ ಸೋಮಲ್, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯರಾದ ಕುಶಾಲಪ್ಪ, ತೆಕ್ಕಡೆ ಶೋಭಾ, ಅಶೋಕ್, ಸುಮಂತ್ ಹಾಗೂ ಇನ್ನಿತರರು ಇದ್ದರು.