ಸದ್ಯ ಆವಾಸ ಸ್ಥಳದಲ್ಲಿ 3 ತಿಂಗಳವರೆಗೆ ವಾಸಕ್ಕೆ ವ್ಯವಸ್ಥೆ : ಬಳಿಕ ಸೂಕ್ತ ಸ್ಥಳ ಮಂಜೂರುಇದ್ದ ಸ್ಥಳದಲ್ಲಿಯೇ ವಸತಿ ಕಲ್ಪಿಸುವಂತೆ ಆಗ್ರಹಿಸಿದರು. ತಾತ್ಕಾಲಿಕವಾಗಿ ಈಗ ಇರುವ ಪ್ರದೇಶದಲ್ಲಿ ವಾಸಿಸಲು ಸಮ್ಮತಿಯಿತ್ತರೂ ಹೋರಾಟವನ್ನು ಮುಂದುವರಿಸುವದಾಗಿ ಪ್ರಕಟಿಸಿದರು. ರಾಜ್ಯದ ಅರಣ್ಯ ಸಚಿವರು, ಕಂದಾಯ ಸಚಿವರು ಹಾಗೂ ಈ ಇಲಾಖಾ ಕಾರ್ಯದರ್ಶಿಗಳೊಂದಿಗೆ ಸಮಾಲೋಚಿಸಿ ದಿಡ್ಡಳ್ಳಿಯಲ್ಲಿಯೇ ಪುನರ್ವಸತಿ ಕಲ್ಪಿಸುವ ಸಾಧ್ಯತೆ ಬಗ್ಗೆ ಚರ್ಚಿಸುವದಾಗಿ ತಿಳಿಸಿದ ಸಚಿವರು ಕಾನೂನು ಪ್ರÀಕಾರ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೀಸಲು ಅರಣ್ಯದಲ್ಲಿ ವಸತಿ ಕಲ್ಪಿಸುವದು ಸುಲಭ ಸಾಧ್ಯವಲ್ಲ ಎಂಬ ಕುರಿತು ಪ್ರತಿಭಟನಾಕಾರರ ಗಮನಕ್ಕೆ ತಂದರು. ಅಂತೂ ಇಂದಿನ ನಿರ್ಧಾರ ಹೋರಾಟಕ್ಕೆ ಸಂದ ತಾತ್ಕಾಲಿಕ ಜಯವಾಗಿದೆ ಎಂದು ಹೋರಾಟ ಪ್ರಮುಖರಾದ ಸಿರಿಮನೆ ನಾಗರಾಜ್, ಡಿ.ಎಸ್. ನಿರ್ವಾಣಪ್ಪ, ಕಂದಗಲ್ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಸ್ಥಳಕ್ಕೆ ಆಗಮಿಸುವಂತೆ ಆದಿವಾಸಿಗಳು ಹೇರಿದ್ದ ಒತ್ತಡಕ್ಕೆ ಮಣಿದು ಇಂದು ಸಚಿವರು ದಿಡ್ಡಳ್ಳಿಗೆ ಮೊದಲ ಭೇಟಿ ನೀಡಿದರು. ಇದೇ ಸಂದರ್ಭ ಸಂಸದ ಪ್ರತಾಪ್‍ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಒಳಗೊಂಡಂತೆ ಜಿಲ್ಲಾಧಿಕಾರಿ ಡಾ.ಆರ್.ವಿ.ಡಿಸೋಜಾ, ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‍ಕುಮಾರ್, ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಐಟಿಡಿಪಿ ಅಧಿಕಾರಿ ಮಾಯಾ ಗಲಗಲಿ, ತಹಶೀಲ್ದಾರ್ ಮಹದೇವಸ್ವಾಮಿ ಒಳಗೊಂಡಂತೆ ಜಿ.ಪಂ., ತಾ.ಪಂ. ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ತೆರವು ಕಾರ್ಯಾಚರಣೆಯ ಕೇಂದ್ರ ಬಿಂದು ತಿತಿಮತಿ ಎಸಿಎಫ್, ಪ್ರಬಾರ ಡಿಸಿಎಫ್ ಸೂರ್ಯಸೇನ್ ಅವರು ಹಾಜರಿದ್ದರು, ವ್ಯಾಪಕ ಪೆÇಲೀಸ್ ಬಂದೋಬಸ್ತ್ ಕಲ್ಪಿಸಿದ ಹಿನ್ನೆಲೆ ದಿಡ್ಡಳ್ಳಿಯಲ್ಲಿ ಬಿಗುವಿನ ವಾತಾವರಣ ಕಂಡು ಬಂತು. ಇದೇ ಸಂದರ್ಭ ಪ್ರತಿಭಟನಾ ನಿರತರು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರಲ್ಲದೆ, ಭೂಮಿಗಾಗಿ ಹೋರಾಟ ಎಂದು ಘೋಷಣೆ ಕೂಗಿದರು.
ದಿಡ್ಡಳ್ಳಿಯಲ್ಲಿ ತೆರವು ಕಾರ್ಯಾಚರಣೆ ಸಂದರ್ಭ ಬೆತ್ತಲೆ ಪ್ರತಿಭಟನೆ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಇಡೀ ರಾಜ್ಯದ ಗಮನ ದಿಡ್ಡಳ್ಳಿಗೆ ಕೇಂದ್ರೀಕೃತಗೊಂಡಿದ್ದು 20 ಕ್ಕೂ ಅಧಿಕ ಸಂಘ ಸಂಸ್ಥೆಗಳ ಸಾಮಾಜಿಕ ಹೋರಾಟಗಾರರು, ಚಿತ್ರ ನಟರು ದಿಡ್ಡಳ್ಳಿಗೆ ಬಂದು ಆದಿವಾಸಿಗಳೊಂದಿಗೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ತೆರವು ಕಾರ್ಯಾಚರಣೆ ನಂತರ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಮೂರು ದಿನ ಇದ್ದರೂ, ದಿಡ್ಡಳ್ಳಿಗೆ ಸುಳಿಯದ ಹಿನ್ನೆಲೆ ಬೇರೆ ಬೇರೆ ಕತೆ ಹುಟ್ಟಿಕೊಂಡು ಆದಿವಾಸಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು.
ಇಂದು ಪ್ರತಿಭಟನಾ ನಿರತರಲ್ಲಿಗೆ ತೆರಳಿ ಮೊದಲಿಗೆ ಆದಿವಾಸಿ ಮುಖಂಡರ ಅಭಿಪ್ರಾಯ ವ್ಯಕ್ತಪಡಿಸಲು ಮನವಿ ಮಾಡಿದರು. ಇದೇ ಸಂದರ್ಭ ಆದಿವಾಸಿ ಮುಖಂಡ ಅಪ್ಪಾಜಿ ಹಾಗೂ ಬೆತ್ತಲೆ ಪ್ರತಿಭಟನೆ ನಡೆಸಿ ಸುದ್ದಿಯಾದ ಜೆ.ಕೆ.ಮುತ್ತಮ್ಮ ಅವರು ಅರಣ್ಯ ಹಾಗೂ ಪೆÇಲೀಸ್ ಇಲಾಖೆಯ ದೌರ್ಜನ್ಯದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ನಾವು ದಿಡ್ಡಳ್ಳಿ ಬಿಟ್ಟು ಎಲ್ಲಿಗೂ ತೆರಳುವದಿಲ್ಲ. ಇಲ್ಲೇ ಮನೆ ನಿರ್ಮಾಣ ಮಾಡಿಕೊಡಿ ಎಂದು ಒತ್ತಾಯಿಸಿದರು. ಲಾಠಿ ಚಾರ್ಜ್ ಹಾಗೂ ಬೆಳಗ್ಗಿನ ಜಾವ ಜೆಸಿಬಿ ಮೂಲಕ ಮಹಿಳೆಯರೂ ಒಳಗೊಂಡಂತೆ ಗುಡಿಸಲು, ಶೆಡ್ ತೆರವು ಮಾಡಲಾದ
(ಮೊದಲ ಪುಟದಿಂದ) ಅಮಾನವೀಯ ಘಟನೆ ಬಗ್ಗೆ ತಿಳಿದೂ ಉಸ್ತುವಾರಿ ಸಚಿವರಾದ ನೀವು ಯಾಕೆ ಭೇಟಿ ನೀಡಲಿಲ್ಲ ಎಂದು ಪ್ರಶ್ನಿಸಿದರು. ತೆರವು ಕಾರ್ಯಾಚರಣೆ ಸಂದರ್ಭ ಮುಂಜಾಗೃತಾ ಕೃಮವಾಗಿ ಬಂಧಿಸಿ, ಜೈಲಿಗೆ ಕಳುಹಿಸಿದ ಎಂಟು ಮಂದಿಯ ವಿರುದ್ಧದ ಕೇಸನ್ನು ವಾಪಾಸ್ಸು ಪಡೆಯಬೇಕು, ದೌರ್ಜನ್ಯ ಎಸಗಿದ ಅರಣ್ಯ -ಪೆÇಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಹಾನಿ ಬಗ್ಗೆ ಪ್ರಕರಣ ದಾಖಲಿಸಿ, ಅಮಾನತುಗೊಳಿಸಬೇಕು. ಎಲ್ಲ 577 ಮಂದಿಗೂ ಪುನರ್ವಸತಿ ಕಲ್ಪಿಸುವವರೆಗೂ ಇಲ್ಲಿಯೇ ಐಟಿಡಿಪಿ ಮೂಲಕ ಪೌಷ್ಟಿಕ ಆಹಾರ ವಿತರಿಸಬೇಕು. ನಮಗೆ ಅರಣ್ಯ ಹಕ್ಕು ಪತ್ರ ಬೇಡ, ಆರ್.ಟಿ.ಸಿ.ಬೇಕು. ಜಿಲ್ಲೆಯ ಯಾವದೇ ಕಂದಾಯ ಭೂಮಿಗೆ ನಾವು ತೆರಳುವದಿಲ್ಲ. ಈ ಜಾಗ ಬೇಡ ಅನ್ನಲು ಕಾರಣವೇನು? ಇಲ್ಲಿ ಆಶ್ರಮ ಶಾಲೆ 1960ರ ದಶÀಕದಲ್ಲಿಯೇ ನಿರ್ಮಾಣವಾಗಿದೆ. ಹಿಂದೆ ಇದ್ದ ಕಂದಾಯ ಭೂಮಿಯನ್ನು ಅರಣ್ಯ ಪೈಸಾರಿಯಾಗಿ ಪರಿವರ್ತಿಸಲಾಗಿದೆ. ನಮಗೆ ಮಾಜಿ ವಿಧಾನ ಪರಿಷತ್ ಸದಸ್ಯ ಎ.ಕೆ.ಸುಬ್ಬಯ್ಯ ಧೈರ್ಯ ಕೊಟ್ಟಿದ್ದಾರೆ. ಇದು ಅರಣ್ಯವಲ್ಲ. ಇಲ್ಲಿ ಉತ್ತಮ ರಸ್ತೆ, ಕಾಫಿ ತೋಟ ಎಲ್ಲವೂ ಇದೆ. ನಾವು ಇಲ್ಲಿಯೇ ಇರುತ್ತೇವೆ ಎಂದು ತಮ್ಮ ವಾದ ಮಂಡಿಸಿದರು.
ನಮಗೆ ತೆರವು ಮಾಡಲಾದ ಜಾಗದಲ್ಲಿಯೇ ಶೆಡ್ ನಿರ್ಮಾಣ ಮಾಡಿಕೊಡಿ, ಶೌಚಾಲಯ ಕಟ್ಟಿಕೊಡಿ ಇದೀಗ ಪ್ರತಿಭಟನಾ ನಿರತ ಸ್ಥಳದಲ್ಲಿ ಸ್ನಾನಕ್ಕೆ ಎಲ್ಲದಕ್ಕೂ ಅಡ್ಡಿಯಾಗಿದೆ. ಆಶ್ರಮ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ ಎಂದು ಅಹವಾಲು ತೋಡಿಕೊಂಡರು.
ಇದೇ ಸಂದರ್ಭ ಪ್ರತಿಕ್ರಿಯಿಸಿದ ಸಚಿವ ಸೀತಾರಾಂ ಅವರು, ದಿಡ್ಡಳ್ಳಿಯಲ್ಲಿ ಆದಿವಾಸಿ ಹೋರಾಟ ಗಾರ್ತಿ ಜೆ.ಕೆ.ಮುತ್ತಮ್ಮ ಅವರಿಗೆ ಅರಣ್ಯ ಹಕ್ಕು ಕಾಯ್ದೆ ಅನ್ವಯ 4 ಎಕರೆ ಜಾಗ ನೀಡಲಾಗಿದೆ, ಜೆ.ಕೆ. ಅಪ್ಪಾಜಿಗೂ 3 ಎಕರೆ ಜಾಗ ನೀಡಲಾಗಿದೆ ಎಂದು ಅರಣ್ಯ ಇಲಾಖೆ, ಜಿಲ್ಲಾಡಳಿತ ನೀಡಿದ ದಾಖಲೆಯನ್ನು ಪತ್ರಕರ್ತರಿಗೆ ನೀಡಿದರು. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಾಗಲೂ ತಾಳ್ಮೆಯಿಂದ ವರ್ತಿಸಿ, ನಿಮ್ಮ ಬೆಂಬಲಕ್ಕೆ ನಾನಿದ್ದೇನೆ. ಬೆತ್ತಲೆ ಪ್ರತಿಭಟನೆ ಮಾಡುವ ನಿರ್ಧಾರ ಕೈಬಿಡಿ ಎಂದು ಮನವಿ ಮಾಡಿದ್ದೆ. ಇದು ದೇವಮಾಚಿ ರಕ್ಷಿತಾರಣ್ಯವಾಗಿದ್ದು ಇಲ್ಲಿ ಹಕ್ಕು ಪತ್ರ ನೀಡಲು ಅಸಾಧ್ಯ. ಸುಪ್ರೀಂ ಕೋರ್ಟ್ ನಮ್ಮನ್ನು ಬಿಡುವದಿಲ್ಲ ಎಂದು ಹೇಳುತ್ತಿದ್ದಂತೆ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಸಂಚಾಲಕ ಸಿರಿಮನೆ ನಾಗರಾಜ್ ಅವರು ಬೇರೆಡೆ ಅರಣ್ಯ ಪೈಸಾರಿ ಯನ್ನು ಡಿ ನೋಟಿಫಿಕೇಷನ್ ಮೂಲಕ ಆದಿವಾಸಿಗಳ ಪುನರ್ವಸತಿಗೆ ನೀಡುವದಾದರೆ, ದಿಡ್ಡಳ್ಳಿಯಲ್ಲೇ ನೀಡಿ. ತಲಾ ಐದು ಎಕರೆ ನೀಡಲು ಒತ್ತಾಯಿಸಿದರು. ಇದೇ ಸಂದರ್ಭ ಸಚಿವ ಸೀತಾರಾಂ ಅವರು ಜೆ.ಕೆ. ಅಪ್ಪಾಜಿಯವರನ್ನು ಉದ್ದೇೀಶಿಸಿ, ನಿಮಗೆ ತಲಾ ಐದು ಎಕರೆ ಕೊಡಲು ಬರುವದಿಲ್ಲ. ನಿವೇಶನ ಮತ್ತು ಮನೆ ನೀಡಬಹುದು. ಆಗುವ ಕಾರ್ಯ ವಿದ್ದರೆ ಮಾಡುತ್ತೇನೆ. ಇಲ್ಲವೆ ಇಲ್ಲಿಂದ ತೆರಳುತ್ತೇನೆ ಎಂದು ಹೇಳಿದ ಸಂದರ್ಭ ಐದು ಎಕರೆ ಬೇಡಿಕೆಯನ್ನು ಕೈ ಬಿಡುವದಾಗಿ ಮುಖಂಡರು ಸಮ್ಮತಿಸಿದ ಘಟನೆಯೂ ನಡೆಯಿತು.
ಕೊಡಗು ಜಿಲ್ಲೆಯ ಆದಿವಾಸಿ ಪ್ರತಿಭಟನಾಕಾರರೊಂದಿಗೆ ಮಾಜಿ ಜಿ.ಪಂ.ಅಧ್ಯಕ್ಷೆ ಕಾವೇರಿ, ಸೋಮವಾರಪೇಟೆಯ ನಿರ್ವಾಣಪ್ಪ, ಬೆಂಗಳೂರಿನ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಂಘ ಒಳಗೊಂಡಂತೆ ದಿನೇ ದಿನೇ ಹೊರಜಿಲ್ಲೆಯ ಸಂಘಟನೆಯ ಸಂಖ್ಯೆಗಳು ಹೆಚ್ಚುತ್ತಿದ್ದು, ಇದೀಗ ಜಿಲ್ಲಾಡಳಿತ ಹಾಗೂ ಅರಣ್ಯ ಅಧಿಕಾರಿಗಳು ಕೈ ಕೈ ಹಿಚುಕಿಕೊಳ್ಳುವಂತೆ ಪರಿಸ್ಥಿತಿ ಹದ್ದು ಮೀರುತ್ತಿದೆ. ಬೆತ್ತಲೆ ಪ್ರತಿಭಟನೆಯ ಸಿಡಿ ದೃಶ್ಯ ಮಾಧ್ಯಮದಲ್ಲಿ ಬಿತ್ತರವಾದ ನಂತರ ರಾಜ್ಯದ ವಿವಿಧೆಡೆಯ ದೃಶ್ಯ ಮಾಧ್ಯಮ ತಂಡಗಳು ದಿಡ್ಡಳ್ಳಿ ಸುತ್ತ ಮುತ್ತ ಬೀಡು ಬಿಟ್ಟಿವೆ. ಅರಣ್ಯ ಇಲಾಖೆಯ ದುಡುಕಿನ ತೀರ್ಮಾನದಿಂದಾಗಿ ಆದಿವಾಸಿ ಹೋರಾಟ ದಿನೇ ದಿನೇ ಹೊಸ ರೂಪ ತಾಳುತ್ತಿದೆ.
ಸಂಸದ ಪ್ರತಾಪ್ ಸಿಂಹ, ಶಾಸಕ ಬೋಪಯ್ಯ ಅವರು ಆದಿವಾಸಿ ಹೋರಾಟಗಾರರ ಮನ ಒಲಿಸಲು ನೋಡಿದರೂ ಪರಿಸ್ಥಿತಿ ಮತ್ತೆ ಕಗ್ಗಂಟಾಗುತ್ತಿದ್ದು, ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ಕಂಡು ಬರುತ್ತಿದೆ. ಆಶ್ರಮ ಮುಂಭಾಗ ಪ್ರತಿಭಟನಾಕಾರರನ್ನು ಉದ್ದೇೀಶಿಸಿ ಮಾತನಾಡಿದ ನಂತರ ಆಶ್ರಮ ಶಾಲಾ ಆವರಣಕ್ಕೆ ತೆರಳಿದ ಸಚಿವರು, ಸಂಸದರು, ಶಾಸಕರು ದೃಶ್ಯ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಕ್ಕೆ ಮುಂದಿನ ನಿಲುವಿನ ಬಗ್ಗೆ ಮಾಹಿತಿ ನೀಡಿದರು. ಇದೀಗ ಸಮಸ್ಯೆಗೆ ಕಾರಣವಾಗಿರುವ 577 ಮಂದಿಯ ಗುರುತಿನ ಚೀಟಿ ಹಾಗೂ ದಾಖಲೆಗಳನ್ನು ಮತ್ತೊಮ್ಮೆ ಕಂದಾಯ ಇಲಾಖೆ ಹಾಗೂ ಐಟಿಡಿಪಿ ಇಲಾಖಾಧಿಕಾರಿಗಳು ಪರಿಶೀಲನೆ ಮಾಡುವಂತೆಯೂ, ಪೌಷ್ಟಿಕ ಆಹಾರವನ್ನು ಗುರುತು ಚೀಟಿಯ ಆಧಾರದ ಮೇರೆ ಎಲ್ಲರಿಗೂ ಇಲ್ಲಿಯೇ ವಿತರಣೆ ಮಾಡಲು, ತಾತ್ಕಾಲಿಕ ಶೆಡ್ ನಿರ್ಮಾಣ, ಶೌಚಾಲಯ ಕಟ್ಟಿಕೊಡಲು, ಕುಡಿಯುವ ನೀರಿಗೆ ಇಲಾಖೆ ಅಡ್ಡಿಪಡಿಸದಿರಲು ಸೂಚನೆ ನೀಡಲಾಯಿತು. ದಿಡ್ಡಳ್ಳಿ ಆಸುಪಾಸಿನಲ್ಲಿ ಪರ್ಯಾಯ ಭೂಮಿ ಗುರುತಿಸಿ ಆದಿವಾಸಿಗಳಿಗೆ ವಿತರಿಸಲು ಇನ್ನೂ ಮೂರು ತಿಂಗಳು ಕಾಲಾವಕಾಶದ ಅಗತ್ಯವಿದ್ದು, ಅದುವರೆಗೂ ತಾಳ್ಮೆಯೊಂದಿಗೆ ಉದ್ರಿಕ್ತ ವಾತಾವರಣ ನಿರ್ಮಾಣವಾಗದಂತೆ ವರ್ತಿಸಲು ಜನಪ್ರತಿನಿಧಿಗಳು ಮನವಿ ಮಾಡಿದರು. ಹಲವು ಬಾರಿ ಸಚಿವ ಸೀತಾರಾಂ ಅವರು ಕೈಮುಗಿದು ಮನವಿ ಮಾಡುತ್ತೇನೆ.. ಎಂದು ಹೇಳಿಯೇ ಮಾತು ಆರಂಭಿಸುತ್ತಿದ್ದರು. ಕೆಲವೊಮ್ಮೆ ಇದು ಇತ್ಯರ್ಥ ಕಾಣುವದಿಲ್ಲ ಎಂದು ತಮ್ಮ ಅಸಹನೆಯನ್ನೂ ಹೊರಹಾಕಿದ ಚಿತ್ರಣ ಕಂಡು ಬಂತು.
ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಲ್ದಾರೆ, ಚೆನ್ನಯ್ಯನ ಕೋಟೆ ಗ್ರಾ.ಪಂ.ಸುತ್ತಮುತ್ತಲಿನಲ್ಲಿಯೇ 577 ಕುಟುಂಬಕ್ಕೆ ನಿವೇಶನ ಗುರುತಿಸಿ, ತನಗೆ ಮಾಹಿತಿ ಒದಗಿಸುವಂತೆ ಸೂಚಿಸಿದ ಸಚಿವರು, 4-5 ಕಡೆ ನಿವೇಶನ ಗುರುತಿಸಿದ ನಂತರ ಆದಿವಾಸಿ ಮುಖಂಡರನ್ನು ಕರೆದೊಯ್ದು ಅವರ ಇಚ್ಛೆಯಂತೆ ಐಟಿಡಿಪಿ ಅಥವಾ ವಸತಿಯೋಜನೆ ಅನ್ವಯ ಮನೆ ನಿರ್ಮಿಸಿಕೊಡಲಾಗುವದು ಎಂದು ಭರವಸೆ ನೀಡಿದರು.
ಅದಕ್ಕೂ ಮುನ್ನ ತಾನು ತಮ್ಮ ಸಂಪರ್ಕದಲ್ಲಿರುವದಾಗಿಯೂ, ಏನೇ ಸಮಸ್ಯೆ ಬಂದರೂ ತನಗೆ ಹೇಳಿಕೊಳ್ಳಿ. ಘರ್ಷಣೆ ಅವಕಾಶ ಬೇಡ ಎಂದು ಹೇಳಿದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಹೇಳಿಕೆ ಯಂತೆ ದಿಡ್ಡಳ್ಳಿಯಲ್ಲಿಯೇ ವಸತಿ ಯೋಜನೆ ಅನುಷ್ಠಾನಗೊಳ್ಳುವ ಅನುಮಾನಗಳು ಇದೀಗ ಹುಟ್ಟಿಕೊಂಡಿದೆ.
ಇಂದು ದಿಡ್ಡಳ್ಳಿಗೆ ಸಚಿವ, ಸಂಸದ, ಶಾಸಕ ಅಭಿಮಾನಿಗಳ ದಂಡೇ ಭೇಟಿ ನೀಡಿತ್ತು. ಜಿ.ಪಂ.ಅಧ್ಯಕ್ಷ ಹರೀಶ್, ತಾ.ಪಂ.ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿ.ಪಂ.ಸದಸ್ಯರಾದ ವಿಜು ಸುಬ್ರಮಣಿ, ಶಶಿ ಸುಬ್ರಮಣಿ, ತಾ.ಪಂ.ಸದಸ್ಯ ಅಜಿತ್ ಕರುಂಬಯ್ಯ, ಸಚಿವ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ತಾ.ಪಂ.ಸದಸ್ಯೆ ಆಶಾ ಜೇಮ್ಸ್, ಜಿ.ಪಂ.ಸದಸ್ಯೆ ಲೀಲಾವತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ.ರಮೇಶ್, ಮಾಜಿ ಅಧ್ಯಕ್ಷ ಬಿ.ಟಿ.ಪ್ರದೀಪ್, ಮಲ್ಲಂಡ ಮಧು ದೇವಯ್ಯ, ಪಿ.ಕೆ.ಪೆÇನ್ನಪ್ಪ, ಮಾಲ್ಧಾರೆ, ಚೆನ್ನಯ್ಯನಕೋಟೆ ಗ್ರಾ.ಪಂ.ಸದಸ್ಯರಿಂದ ತುಂಬಿ ಹೋಗಿದ್ದುದು ಗೋಚರ ವಾಯಿತು.. ಪ್ರಬಾರ ಜಿಲ್ಲಾ ಪೆÇಲೀಸ್ ಅಧೀಕ್ಷಕ ಮುತ್ತುರಾಜ್, ಮಡಿಕೇರಿ ಡಿವೈಎಸ್‍ಪಿ ಚಬ್ಬಿ, ಮಡಿಕೇರಿ ನಗರ ಸಿಪಿಐ ಮೇದಪ್ಪ, ಗ್ರಾಮಾಂತರ ಸಿಪಿಐ ಪ್ರದೀಪ್, ಗೋಣಿಕೊಪ್ಪಲು ಸಿಪಿಐ ಪಿ.ಕೆ.ರಾಜು, ಸಿದ್ದಾಪುರ ಎಸ್‍ಐ ಸಂತೋಷ್ ಕಶ್ಯಪ್, ಗೋಣಿಕೊಪ್ಪಲು ಎಸ್‍ಐ ಗೋವಿಂದರಾಜು ಒಳ ಗೊಂಡಂತೆ ಸುಮಾರು 100 ಮಂದಿ ಹೆಚ್ಚುವರಿ ಪೆÇಲೀಸ್ ಸಿಬ್ಬಂದಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಿಯೋಜಿಸಲಾಗಿತ್ತು.
ಈ ತೀರ್ಮಾನಕ್ಕೂ ಮುನ್ನ ಇಂದು ಬೆಳಿಗ್ಗೆಯಿಂದಲೇ ಹೋರಾಟ ಗಾರರ ಪಾಳಯಕ್ಕೆ ರಾಜ್ಯದ ಅನೇಕ ಪ್ರಮುಖರು ಆಗಮಿಸಿದ್ದರು. ಪ್ರೊ. ಕೆ.ಎಸ್.ಭಗವಾನ್ ಅವರು ಸ್ಥಳಕ್ಕೆ ಭೇಟಿಯಿತ್ತು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಗಿರಿಜನ ಮಂದಿಯ ಮೇಲೆ ದೌರ್ಜನ್ಯ ನಡೆಸುವ ಅಧಿಕಾರಿ ಗಳನ್ನು ಅವರು ಲೂಟಿಕೋರರು ಎಂದು ಜರೆದರು. ರಾಜ್ಯ ಹಿಂದುಳಿದ ವರ್ಗಗಳ ಸಂಘಟನಾ ಪ್ರಮುಖ ಶಿವರಾಂ ಆಗಮಿಸಿ ಗಿರಿಜನರನ್ನು ಮೃಗಗಳಿಗಿಂತ ಕಡೆಯಾಗಿ ಕಾಣಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಸದ ಪ್ರತಾಪ್ ಸಿಂಹ ಅವರು ಬರುವ ಮುನ್ನ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಕಾಂತಿ ಸತೀಶ್ ಅವರು ಸ್ಥಳಕ್ಕೆ ತೆರಳಿದಾಗ ಕೆಲವು ಪ್ರತಿಭಟನಾಕಾರರು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯೊಂದರ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆಯಿತು. ಇದರಿಂದ ಸಿಟ್ಟಿಗೆದ್ದ ಕಾಂತಿ ಅವರು ಪ್ರತಿರೋಧ ವ್ಯಕ್ತಪಡಿಸಿದಾಗ ಕೆಲವರೊಂದಿಗೆ ವಾಗ್ವಾದ ನಡೆದರೂ ಸಂಸದರು ಹೋರಾಟಗಾರರ ಪರವಾಗಿದ್ದಾರೆ ಎಂದು ಕಾಂತಿ ಮನದಟ್ಟು ಮಾಡಿದಾಗ ಪರಿಸ್ಥಿತಿ ತಿಳಿಯಾಯಿತು. ಬಳಿಕ ಸಂಸದ ಪ್ರತಾಪ್ ಸಿಂಹ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಇವರುಗಳು ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಸಮಾಲೋಚನೆ ನಡೆಸಿದರು.
ಸಚಿವ ಸೀತಾರಾಂ ಅವರು ಕೊನೆ ಹಂತದಲ್ಲಿ ನಡೆಸಿದ ಸಮಾಲೋಚನೆಯ ಸಂದರ್ಭ ಹೋರಾಟ ಸಮಿತಿ ಸಂಚಾಲಕ ಸಿರಿಮನೆ ನಾಗರಾಜ್,, ಮಲ್ಲಿಗೆ, ಡಿ.ಎಸ್.ನಿರ್ವಾಣಪ್ಪ, ಸ್ಥಳೀಯ ನಾಯಕರುಗಳಾದ ಜೆ.ಕೆ. ಮುತ್ತಮ್ಮ, ಜೆ..ಕೆ. ಅನಿತ, ಜೆ ಕೆ ಸಾಮಿ, ಅಪ್ಪಾಜಿ ಮೊದಲಾದವರಿದ್ದರು.
ಬಿ.ಜೆ.ಪಿ. ಪ್ರಮುಖ ಎಸ್.ಎನ್ ರಾಜಾರಾವ್, , ಜಿ.ಪಂ.ಮಾಜಿ ಸದಸ್ಯೆ ಕಾಂತಿ ಸತೀಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಎಂ ಲೋಕೇಶ್ ಮೊದಲಾದವರಿದ್ದರು.