ಶನಿವಾರಸಂತೆ, ಸೆ. 21: ನಿಡ್ತ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಅವರ ಕಾರ್ಯವೈಖರಿಯ ಬಗ್ಗೆ ಆಕ್ರೋಶಗೊಂಡ ಪಂಚಾಯಿತಿಯ 13 ಮಂದಿ ಸದಸ್ಯರುಗಳು ಸಭೆಯನ್ನು ವಿರೋಧಿಸಿ ಹೊರ ನಡೆದ ಘಟನೆ ಇತ್ತೀಚೆಗೆ ನಡೆಯಿತು.

ನಿಡ್ತ ಗ್ರಾ.ಪಂ.ನ ಮಾಸಿಕ ಸಭೆ ತಾ. 19 ರಂದು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಮುಸ್ತಾಫ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಅಧ್ಯಕ್ಷ ಮುಸ್ತಾಫ ಅವರು ಮಾತನಾಡಿ, ಪಂಚಾಯಿತಿಯಲ್ಲಿ ಯಾವದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಸರಕಾರದ ಯಾವದೇ ಅನುದಾನಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲಪಿಸುವಲ್ಲಿ ಅಭಿವೃದ್ಧಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಾರ್ವಜನಿಕರಿಂದ ಕಂದಾಯ ವಸೂಲಾತಿ ಮಾಡಿರುವ ಹಣ ಪ್ರತಿ ದಿನ ಬ್ಯಾಂಕಿಗೆ ಪಾವತಿಸದೆ ಸುಮಾರು ರೂ. 47 ಸಾವಿರ ಹಣ ಬ್ಯಾಂಕಿಗೆ ಪಾವತಿಯಾಗಿಲ್ಲ. ಪಾಸ್ ಪುಸ್ತಕದಲ್ಲಿ ದಾಖಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಂಚಾಯಿತಿ ಬಿಲ್ ಕಲೆಕ್ಟರ್ ಧರ್ಮಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿಯಿಂದ ಆಯ್ಕೆ ಮಾಡಿದ ವಸತಿ ಫಲಾನುಭವಿಗಳಿಗಿ ರುವ (ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ) ಭೂಮಿಯನ್ನು ಪರಿಶೀಲನೆ ಮಾಡದೆ ವಿನಾಃಕಾರಣ ಮುಂದೂಡಿ ಕೊಂಡು ಬರಲಾಗುತ್ತಿದೆ ಎಂದು ಸದಸ್ಯ ಅಶೋಕ್ ಆಪಾದಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 4 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ನೀರು ವಿತರಿಸುವಲ್ಲಿ ಸಮಸ್ಯೆ ಆಗುತ್ತಿದೆ ಎಂದು ಸದಸ್ಯೆ ಯಶೋದ ಆರೋಪಿಸಿದರು. ಸಾರ್ವಜನಿಕರು ಹಾಗೂ ಸದಸ್ಯರು ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಸಂದರ್ಭ ಅಭಿವೃದ್ಧಿ ಅಧಿಕಾರಿ ಲಭ್ಯವಿರುವದಿಲ್ಲ ಎಂದು ಸದಸ್ಯರುಗಳು ಆಪಾದಿಸಿದರು.

ಅಭಿವೃದ್ಧಿ ಅಧಿಕಾರಿ ವಿರುದ್ಧ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವಂತೆ ನಿರ್ಣಯ ಮಂಡಿಸಿ, ಅಧ್ಯಕ್ಷ ಮುಸ್ತಾಫ, ಉಪಾಧ್ಯಕ್ಷೆ ಕಾಳಮ್ಮ, ಸದಸ್ಯರುಗಳಾದ ಅಶೋಕ್, ದಯಾನಂದ, ನಟೇಶ್, ವಿಜಯಕುಮಾರ್, ಗಂಗಾಧರ, ನಳಿನಿ, ಯಶೋದ, ಪವಿತಚಂದ್ರ, ಹೂವಮ್ಮ, ಮಂಜುಳ, ಸಾವಿತ್ರಮ್ಮ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.