ವೀರಾಜಪೇಟೆ, ಡಿ. 17: ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ದೇವರಾಜು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಇದು ಸ್ವಾರ್ಥ ಸಾಧನೆ ಹಾಗೂ ದುರುದ್ದೇಶ ಪೂರಿತ ಎಂದು ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಚ್ಚೀರ ರೋನಾ ಭೀಮಯ್ಯ ಹೇಳಿದರು.
ಗ್ರಾಮ ಪಂಚಾಯಿತಿ ಸಭಾಂಗಣ ದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋನಾ ಭೀಮಯ್ಯ ಅವರು, 12 ಸದಸ್ಯರಿರುವ ಪಂಚಾ ಯಿತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಆಯ್ಕೆಯಾದ ಸದಸ್ಯರಿದ್ದಾರೆ. ನಮ್ಮಲ್ಲಿ ಯಾವದೇ ಪಕ್ಷ ಹಾಗೂ ಜಾತಿ ಬೇಧವಿಲ್ಲ. ರಾಜಕೀಯ ರಹಿತವಾಗಿ ಗ್ರಾಮದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ. ಎಲ್ಲ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಮಾನತೆಯನ್ನು ಕಾಯ್ದು ಕೊಳ್ಳುತ್ತಿದ್ದೇವೆ. ಕಾರ್ಮಾಡು ಪಂಚಾಯಿತಿ 2ನೇ ಶ್ರೇಣಿಯ ಪಂಚಾಯಿತಿ ಆದ ಕಾರಣ ಖಾಯಂ ಕಾರ್ಯದರ್ಶಿ, ಪಿಡಿಓಗಳಿಲ್ಲ. ಬಿಲ್ ಕಲೆಕ್ಟರ್ ಕುಟ್ಟಂಡ ರವಿ ತಮ್ಮಯ್ಯ ಎಲ್ಲಾ ಕೆಲಸವನ್ನು ನಿರ್ವಹಿಸ ಬೇಕಾಗಿದೆ. ಅವರಿಗೆ ಕೆಲಸದ ಒತ್ತಡವಿದೆ ಸದಸ್ಯ ದೇವರಾಜು ಅವರು ತಮ್ಮ ವಾರ್ಡ್‍ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಗುತ್ತಿಗೆಯನ್ನು ತನಗೆ ಪ್ರತ್ಯೇಕವಾಗಿ ಕೊಡಿ ಎಂದು ರವಿ ತಮ್ಮಯ್ಯ ಅವರ ಮೇಲೆ ದುಂಬಾಲು ಬಿದ್ದ ಕಾರಣ ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸದಸ್ಯರಿಗೆ ಗುತ್ತಿಗೆ ನೀಡುವಂತೆ ಪಂಚಾಯಿತಿ ಕಾನೂನಲ್ಲಿ ಅವಕಾಶ ಇಲ್ಲದ ಕಾರಣ ಬೇರೆ ಅರ್ಹ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲು ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಮುಂದಿನ ಮಾಸಿಕ ಸಭೆಗೆ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸಭೆಗೆ ಹಾಜರಾದರು. ಇತರ ಸದಸ್ಯರು ಅವರನ್ನು ಮನವೊಲಿಸಲು ಮುಂದಾದರೂ ಅವರು ತನಗೆ ಗುತ್ತಿಗೆ ನೀಡಬೇಕು ಎಂದು ಪಟ್ಟು ಹಿಡಿದು 2 ಬಾರಿ ಸಭೆಯನ್ನು ಬಹಿಷ್ಕರಿಸಿದ್ದಾರೆ. ಅವರ ನಡೆ ಹಾಗೂ ವರ್ತನೆಯನ್ನು ಸರಿಪಡಿಸಿಕೊಳ್ಳುವಂತೆ ನ. 14 ರಂದು ಪಿಡಿಓ ಮೂಲಕ ಮನವಿ ಪತ್ರ ಕಳುಹಿಸಲಾಗಿತ್ತು. ನ. 16 ರಂದು ಕಚೇರಿಗೆ ಆಗಮಿಸಿ ಪಿಡಿಓ ಮೇಲೆ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅಮ್ಮತ್ತಿ ಪೊಲೀಸ್ ಉಪಠಾಣೆಯಲ್ಲಿ ದೂರು ನೀಡಿದ ಪರಿಣಾಮ ತಾ. 9 ರಂದು ಪಿಡಿಓ ಮೇಲೆ ಜಾತಿ ನಿಂದನೆ ಆಪಾದನೆ ಹೊರಿಸಿ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಕೇವಲ ಅವರ ಸ್ವಾರ್ಥ ಸಾಧನೆ ಹಾಗೂ ಪಂಚಾಯಿತಿಯ ಮೇಲೆ ಕಳಂಕ ತರುವ ಉದ್ದೇಶವಾಗಿದೆ. ಇದು ಪಂಚಾಯಿತಿಯ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಕೃತ್ಯ ಎಂದು ಹೇಳಿದರು. ಸದಸ್ಯೆ ಹೆಚ್.ವಿ. ಜಯ ಮಾತನಾಡಿ, ಅಭಿವೃದ್ಧಿ ಕಾರ್ಯ ಗಳನ್ನು ಸಹಿಸಲು ಸಾಧ್ಯವಾಗದೆ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು. ಪಂಚಾಯಿತಿ ಸದಸ್ಯ ಮಾಚಿಮಂಡ ಸುರೇಶ್ ಅಯ್ಯಪ್ಪ ಮಾತನಾಡಿ, ಕಾರ್ಮಾಡು ಪಂಚಾಯಿತಿಯ 12 ಸದಸ್ಯರುಗಳ ಪೈಕಿ 11 ಮಂದಿ ಸಮಾನತೆಯಿಂದ ಜನಪರ ಕಾಮಗಾರಿಗಳಿಗೆ ಒತ್ತು ನೀಡುತ್ತಿದ್ದೇವೆ. ದಲಿತ ವರ್ಗಕ್ಕೆ ಸೇರಿದ ದೇವರಾಜು ಪಂಚಾಯಿತಿ ಕಾಮಗಾರಿ ಗುತ್ತಿಗೆಗೆ ಬಯಸಿದ್ದರು. ಆದರೆ ಕಾನೂನು ಬದ್ಧವಾಗಿ ಅವರಿಗೆ ಗುತ್ತಿಗೆ ಕೊಡಲು ಬರುವದಿಲ್ಲ. ಇದನ್ನು ಸಹಿಸದ ದೇವರಾಜ್ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬಡುವಮಂಡ ಸುನೀತಾ, ಸದಸ್ಯರುಗಳಾದ ವಿ.ಎನ್. ಸುರೇಶ್, ಕುಂಞಂಡ ನಿರನ್ ನಾಣಯ್ಯ, ಕೆ.ಎಂ. ಹಂಸ, ಎರವರ ಬೇಬಿ, ಎಂ.ಎ. ಸಂತೋಷ್, ಸಮೀರಾ ಉಪಸ್ಥಿತರಿದ್ದರು.