ಬೆಂಗಳೂರು, ಜು. 14: ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಕುರಿತು ನ್ಯಾಯಾಂಗ ವಿಚಾರಣೆ ನಡೆಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು. ಆದರೆ, ಅದಕ್ಕೆ ಒಪ್ಪದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಸಿಬಿಐ ತನಿಖೆಗೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಆಹೋರಾತ್ರಿ ಧರಣಿ ನಡೆಸಿದರು.

ಸರ್ಕಾರದ ನಿರ್ಧಾರವನ್ನು ಸಾರಾಸಗಟಾಗಿ ತಿರಸ್ಕರಿಸಿದ ವಿರೋಧಪಕ್ಷದ ಸದಸ್ಯರು, ಜಾರ್ಜ್ ಅವರನ್ನು ಸಂಪುಟದಿಂದ ತಕ್ಷಣವೇ ವಜಾ ಮಾಡಿ, ಎಫ್‍ಐಆರ್ ದಾಖಲಿಸಬೇಕು ಹಾಗೂ ಪ್ರಕರಣ ವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದು ರಾತ್ರಿ ಇಡೀ ವಿಧಾನ ಸೌಧದಲ್ಲಿ ಧರಣಿ ನಡೆಸಿದರು.

ಜಗದೀಶ್ ಶೆಟ್ಟರ್ ಮತ್ತು ಎಚ್ ಡಿ ಕುಮಾರ ಸ್ವಾಮಿ ಮುಂದಿನ ಹೋರಾಟದ ಬಗ್ಗೆ ರೂಪು ರೇಷೆಗಳನ್ನು ಸಿದ್ದಪಡಿಸುತ್ತಿದ್ದರೇ ಎರಡು ಪಕ್ಷದ ಶಾಸಕರು ಆಡಳಿತ ಪಕ್ಷದ ವಿರುದ್ಧ ಹೇಗೆ ಧಾಳಿ ನಡೆಸಬೇಕು ಎಂಬ ಚರ್ಚೆಯಲ್ಲಿ ನಿರತರಾಗಿದ್ದರು.

ಧರಣಿ ನಡೆಸುವ ಶಾಸಕರಿಗೆ ಊಟ ಹಾಗೂ ಮಲಗಲು ಅನುಕೂಲ ಮಾಡಿಕೊಡುವಂತೆ ಸ್ಪೀಕರ್ ಕೆ.ಬಿ ಕೋಳಿವಾಡ್ ವಿಧಾನಸಭೆ ಕಾರ್ಯದರ್ಶಿಗೆ ಸೂಚಿಸಿದ್ದರು.

ಸಂಜೆ ವಿಧಾನಸಭೆಯ ಮೊಗಸಾಲೆಯಲ್ಲಿ ಬಿಸಿ ಬಿಸಿ ಕಾಫಿ, ಗರಿಗರಿ ಮಂಡಕ್ಕಿ ಸೇವಿಸಿದ ನಾಯಕರು ರಾತ್ರಿ ಚಪಾತಿ, ಪಲ್ಯ, ಅನ್ನ ಸಾರು ತಿಂದರು.

ಸಕ್ಕರೆ ಕಾಯಿಲೆ ಇರುವ ಕೆಲ ಶಾಸಕರಿಗೆ ಮನೆಯಿಂದ ಅವಶ್ಯಕವಿರುವ ಔಷಧಿಗಳನ್ನು ಕಳುಹಿಸಲಾಗಿತ್ತು, ಮಲಗಲು ವಿಧಾನಸಭೆ ಕಾರ್ಯದರ್ಶಿ ಬೆಡ್‍ಗಳ ವ್ಯವಸ್ಥೆ ಮಾಡಿದ್ದರು. ಇನ್ನೂ ಕೆಲ ನಾಯಕರು ಸೋಫಾಗಳನ್ನೇ ಬೆಡ್ ಗಳನ್ನಾಗಿ ಮಾಡಿಕೊಂಡು ಮಲಗಿದ್ದರು.

ಸಚಿವ ಜಾರ್ಜ್ ರಾಜೀನಾಮೆ ನೀಡುವವರೆಗೂ ನಮ್ಮ ಧರಣಿ ಮುಂದುವರಿಯಲಿದ್ದು, ಜುಲೈ 30 ಆದರೆ ಅಧಿವೇಶನ ಮುಗಿದ ಬಳಿಕ, ಇಬ್ಬರು ಡಿವೈಎಸ್ ಪಿಗಳ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆÉಸುವದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.