ಕುಶಾಲನಗರ, ಸೆ. 2: ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಕುಶಾಲನಗರ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಹೆಚ್ಚುವರಿ ಅನುದಾನ ಅಗತ್ಯವಿರುವ ಕಾರಣ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಸಂಸದರು ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಿಸಿದರು. ಕಾಮಗಾರಿ ಸ್ಥಗಿತಗೊಂಡಿರುವ ಕಾರಣ ನಿಲ್ದಾಣದ ಜಾಗ ಸ್ಥಳೀಯ ವಿದ್ಯಾಸಂಸ್ಥೆಗಳ ವಾಹನಗಳ ನಿಲುಗಡೆ ಸ್ಥಳವಾಗಿ ಮಾರ್ಪಾಡುಗೊಂಡಿರುವ ಬಗ್ಗೆ ಸ್ಥಳೀಯರು

ಈ ಸಂದರ್ಭ ದೂರಿದರು. ಈ ಸಂದರ್ಭ ಮಾತನಾಡಿದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ. ಚರಣ್, ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಅಂತಿಮಗೊಳಿಸಲು ಹಣಕಾಸಿನ ಕೊರತೆಯಿದ್ದು ಈ ಸಂಬಂಧ ಲೋಕಸಭಾ ಸದಸ್ಯರ ನಿಧಿಯಿಂದ 15 ಲಕ್ಷ ರೂಗಳ ಅನುದಾನಕ್ಕೆ ಮನವಿ ಮಾಡಿರುವದಾಗಿ ಮಾಹಿತಿ ನೀಡಿದರು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಅಭಿಯಂತರ ಶಿವಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿ ಜಗದೀಶ್ ಮತ್ತು ಸ್ಥಳೀಯ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.