ಕುಶಾಲನಗರ, ಡಿ. 10: ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಬಗ್ಗೆ ಕನಿಷ್ಟ ತಿಳುವಳಿಕೆಯಾದರೂ ಇರಬೇಕಾಗಿದೆ ಎಂದು ಮೈಸೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಂಯೋಜಕ ಡಾ. ಎಸ್. ನರೇಂದ್ರ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಚಿಕ್ಕ ಅಳುವಾರದ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಂವಿಧಾನ ದಿನ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ‘ಸಂವಿಧಾನದ ಮಹತ್ವ ಮತ್ತು ಅದರ ಪ್ರಸ್ತುತತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಭಾರತದ ಪ್ರತಿಯೊಬ್ಬ ಪ್ರಜೆಯು ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು, ಸಹಬಾಳ್ವೆಯಿಂದ ಬದುಕಬೇಕು. ವರ್ಗ, ವರ್ಣ ಹಾಗೂ ಲಿಂಗ ತಾರತಮ್ಯದಂತಹ ಸಾಮಾಜಿಕ ಪಿಡುಗಿನ ನಿರ್ಮೂಲನೆ ಮಾಡಬೇಕೆಂಬ ಸದುದ್ದೇಶದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಆಶಯದಲ್ಲಿ ಈ ಎಲ್ಲಾ ಅಂಶಗಳನ್ನು ಅಳವಡಿಸಿದ್ದರ ಪರಿಣಾಮದಿಂದಾಗಿ ಇಂದು ನಾವೆಲ್ಲರೂ ಸಮಾನತೆಯಿಂದ ಬದುಕಲು ಸಾಧ್ಯವಾಗಿದೆ ಎಂದರು.

ಸಂವಿಧಾನದ ಮೂಲ ಆಶಯಗಳನ್ನು ಪ್ರಜೆಗಳಿಗೆಲ್ಲಾ ತಲಪಿಸುವ ಸಲುವಾಗಿ ಕಳೆದ ವರ್ಷದಿಂದ ಕೇಂದ್ರ ಸರ್ಕಾರ ಸಂವಿಧಾನ ದಿನವನ್ನು ನವೆಂಬರ್ 26 ರಂದು ಆಚರಣೆ ಮಾಡಿಕೊಂಡು ಬಂದಿದೆ. ಇಂತಹ ಅರ್ಥಪೂರ್ಣ ದಿವಸದಂದು ಸಂವಿಧಾನದ ಸರ್ವಧರ್ಮ ಸಮಭಾವದ ಆಶಯವನ್ನು ಎಲ್ಲೆಡೆ ಪಸರಿಸುವಂತೆ ಮಾಡಬೇಕಾದ ಅವಶ್ಯಕತೆ ಇದೆ. ಕೇವಲ ಸಾಂಕೇತಿಕವಾಗಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಣೆ ಮಾಡದೆ ಸಾಮಾನ್ಯ ಪ್ರಜೆಗೂ ಸಂವಿಧಾನದ ಬಗ್ಗೆ ಕನಿಷ್ಟ ತಿಳುವಳಿಕೆಯಾದರೂ ಮೂಡುವಂತೆ ಮಾಡಬೇಕು. ಇಂದಿಗೂ ಜೀವಂತವಾಗಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಜೀವನವನ್ನು ಸಂಸ್ಕøತಿಯ ಒಂದು ಭಾಗವಾಗುವಂತೆ ಮಾಡುವ ಹೊಣೆ ಪ್ರತಿಯೊಬ್ಬ ಭಾರತೀಯ ಪ್ರಜೆಗಳದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕ ಅಳುವಾರದ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ವಿ. ರವೀಂದ್ರಾಚಾರಿ ಅವರು, ಮಾನವೀಯ ಸಹಜ ಗುಣಗಳನ್ನು ರಕ್ಷಣೆ ಮಾಡುವ ಹೊಣೆಯನ್ನು ಸಂವಿಧಾನ ಹೊಂದಿದೆ. ಒಂದು ದೇಶದ ಸಧೃಡತೆ ಮತ್ತು ಬಲಾಢ್ಯತೆಗೆ ಸಂವಿಧಾನದ ಪಾತ್ರ ಅತ್ಯಧಿಕವಾದುದು. ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಸತತ ಅಭ್ಯಾಸದಿಂದ ಗಳಿಸಿಕೊಂಡ ವಿದ್ವತ್ತು, ತಮ್ಮ ಅನುಭವ ಹಾಗೂ ಇತರ ದೇಶಗಳಲ್ಲಿ ಜಾರಿಯಲ್ಲಿದ್ದ ಸಂವಿಧಾನದ ಆಶಯಗಳನ್ನು ಮನನ ಮಾಡಿಕೊಂಡು ಈ ದೇಶಕ್ಕೆ ಒಂದು ಬೃಹತ್ ಲಿಖಿತ ಸಂವಿಧಾನವನ್ನು ದೊರಕಿಸಿ ಕೊಟ್ಟಿದ್ದಾರೆ ಇದು ನಾವೆಲ್ಲರೂ ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಪುಷ್ಪಲತಾ, ಪ್ರೊ. ಮಂಜುಳ ಶಾಂತರಾಮ್, ಗಣಕ ವಿಭಾಗದ ನಿರ್ದೇಶಕ ಪ್ರೊ. ವಾದಿರಾಜ್ ನಂಜನಗೂಡು, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶ್ರೀನಾಥ್, ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕಿ ಗುಣಶ್ರೀ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ವೆಂಕಟೇಶ್, ಮಮತ, ತಾರಾ, ಇತಿಹಾಸ ವಿಭಾಗದ ಅರುಣ್ ಕುಮಾರ್, ಎಲ್ಲಾ ಬೋಧಕ ವರ್ಗ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.