ಸೋಮವಾರಪೇಟೆ,ಸೆ.25: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಹಾಗೂ ಆದರ್ಶಗಳನ್ನು ಮೈಗೊಡಿಸಿಕೊಂಡು ಸಮಾಜವನ್ನು ಉದ್ಧರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ವಿ.ಎಸ್.ಸತೀಶ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕೃಷ್ಣಪ್ಪ ಸ್ಥಾಪಿತ) ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸಂವಿಧಾನ ರಚಿಸಲು ಡಾ. ಅಂಬೇಡ್ಕರ್ ಪಟ್ಟ ಶ್ರಮ ಅಪಾರವಾಗಿದೆ. ಸರ್ವ ಜನಾಂಗದ ಉದ್ಧಾರಕ್ಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಅವರು ತೋರಿದ ದೂರದೃಷ್ಟಿಯ ಚಿಂತನೆ ಪ್ರಶಂಸನೀಯ ಎಂದರು.
ದಲಿತರ ಉದ್ಧಾರಕ್ಕಾಗಿ ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಜನಾಂಗದ ಅಭಿವೃದ್ಧಿಗೆ ನಾಂದಿ ಹಾಡಿದವರಲ್ಲಿ ಬಿಎಸ್ಪಿ ನಾಯಕರಾಗಿದ್ದ ದಿ.ಕಾನ್ಶಿರಾಂ ಅವಿರತ ಶ್ರಮ ವಹಿಸಿದ್ದರು. ನಂತರ ದಿನಗಳಲ್ಲಿ ಜನಾಂಗದ ಏಳಿಗೆಗೆ ಯಾರೂ ಕೂಡ ಪರಿಣಾಮಕಾರಿಯಾಗಿ ಶ್ರಮಿಸಲಿಲ್ಲ ಎಂದ ಅವರು, ಅವರ ಹಾದಿಯಲ್ಲಿ ಸಾಗುವ ಮೂಲಕ ಜನಾಂಗ ಬಾಂಧವರಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜನಾಂಗದ 22 ಪ್ರತಿಭಾವಂತ ದಲಿತ ವಿದ್ಯಾರ್ಥಿಗಳನ್ನು ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಅಧಿಕ ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಈರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಎಚ್.ವಿ. ದೇವದಾಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಪಿ.ಚಂದ್ರಶೇಖರ್, ಸಿಪಿಐ ಪರಶಿವ ಮೂರ್ತಿ, ಕದಸಂಸ ಕೊಡಗು-ಮೈಸೂರು ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್, ಜಿಲ್ಲಾ ಸಂಘಟನಾ ಸಂಚಾಲಕಿ ಸಾವಿತ್ರಮ್ಮ, ಮಡಿಕೇರಿ ತಾಲೂಕು ಸಂಚಾಲಕ ಎಚ್.ಎಲ್.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸಮಿತಿ ವತಿಯಿಂದ ಅಂಬೇಡ್ಕರ್ ಪ್ರತಿಮೆಯಿಂದ ತಾಲೂಕು ಪಂಚಾಯಿತಿ ಸಭಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು.