ಮಡಿಕೇರಿ, ಜು. 29: ಸಂಪಾಜೆ ಗ್ರಾಮ ಸಭೆ ಪಯಸ್ವಿನ ಸಹಕಾರ ಸದನದಲ್ಲಿ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಪಾಜೆ ಸರ್ಕಾರಿ ಆಸ್ಪತ್ರೆಗೆ ಶೀಘ್ರದಲ್ಲಿ ವೈದ್ಯರನ್ನು ನೇಮಿಸಬೇಕು. ಆರೋಗ್ಯ ಇಲಾಖೆ ಜನರನ್ನು ವಂಚಿಸುತ್ತಿದ್ದು, ಯಾವದೇ ಸೇವೆ ಇಲ್ಲದಂತಾಗಿದೆ. ಈ ಹಿಂದೆ ಕೆ.ವಿ.ಜಿ. ಸಂಸ್ಥೆಯವರು ನಿರ್ವಹಿಸುತ್ತಿದ್ದು, ಇದೀಗ ಸರ್ಕಾರವೇ ಆಸ್ಪತ್ರೆಯ ನಿರ್ವಹಣೆ ಜವಾಬ್ದಾರಿ ಹೊಂದಿದ್ದು, ನಾಲ್ಕು ತಿಂಗಳು ಆದರೂ ಯಾವದೇ ಕ್ರಮ ವಹಿಸಿಲ್ಲವೆಂದು ಗ್ರಾಮಸ್ಥರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದರ ಬಗ್ಗೆ ಸರಕಾರ ಸೂಕ್ತ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಕಂದಾಯ ಇಲಾಖೆಯು ನಿಷ್ಕ್ರಿಯಗೊಂಡಿದ್ದು, 94 ಸಿ ಅಡಿಯಲ್ಲಿ ಹಕ್ಕುಪತ್ರವನ್ನು ತಕ್ಷಣವಾಗಿ ಕ್ರಮ ವಹಿಸಬೇಕೆಂದು ನಿರ್ಣಯಿಸ ಲಾಯಿತು. ಅಡಿಕೆ, ತೆಂಗು , ಕಾಫಿ, ರಬ್ಬರ್, ಕೊಕ್ಕೋ ಬೆಳೆಗಳು ಬಹುವರ್ಷ ಬೆಳೆಗಳಾಗಿವೆ. ಇಂತಹ ಬೆಳೆಗಳನ್ನು ಆರ್.ಟಿ.ಸಿ.ಯಲ್ಲಿ ಪ್ರತಿ ವರ್ಷ ನಮೂದಿಸುವ ಅಗತ್ಯವಿಲ್ಲ. ಈ ಬಗ್ಗೆ ಸರ್ಕಾರ ಹೊಸ ನೀತಿಯನ್ನು ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ನಿರ್ಣಯಿಸಲಾಯಿತು. ಗ್ರಾಮೀಣ ರಸ್ತೆಗಳನ್ನು ಗ್ರಾಮ ನಕ್ಷೆಗೆ ಸೇರ್ಪಡೆಮಾಡಬೇಕು. ಬೀದಿ ದನಗಳಿಂದ ಕೃಷಿಕರಿಗೆ ತೊಂದರೆಯನ್ನು ತಡೆಗಟ್ಟಲು ದನದ ವಾರಿಸುದಾರರ ದನಗಳಿಗೆ ಗುರುತುಪಡಿಸುವ ಚಿಹ್ನೆಯನ್ನು ಅಳವಡಿಸುವಂತೆ ಪಶು ವೈದ್ಯಕೀಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಜಂಟಿಯಾಗಿ ಕ್ರಮವಹಿಸಲು ತೀರ್ಮಾನಿಸಲಾಯಿತು. ಪಡಿತರ ಚೀಟಿಯನ್ನು ಹೊಂದಿದವರು ತಕ್ಷಣ ಪಡಿತರ ಚೀಟಿಗೆ ಆಧಾರ್ ಕಾರ್ಡ್‍ನ್ನು ಜೋಡಣೆ ಮಾಡುವಂತೆ ಸೂಚಿಸಲಾಯಿತು.

ಬೆಳೆ ವಿಮಾ ಯೋಜನೆಯಡಿಯಲ್ಲಿ, ಮುಂದಿನ ಸಾಲಿಗೆ ಕೊಕ್ಕೋ, ತೆಂಗು, ರಬ್ಬರ್, ಕಾಫಿ ಇನ್ನಿತರ ಬೆಳೆಗಳನ್ನು ಸೇರಿಸಿ ಕೊಳ್ಳುವಂತೆ ತೀರ್ಮಾನಿಸಲಾಯಿತು. ಶಾಲೆಗಳಲ್ಲಿ ಪ್ರತಿ ತರಗತಿಗೆ ಒಬ್ಬರಂತೆ ಶಿಕ್ಷಕರನ್ನು ನೇಮಿಸಬೇಕು, ಇಲ್ಲದಿದ್ದಲ್ಲಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಅನಾಥವಾಗಲಿದೆ ಎಂಬ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚಿಸಿ ಇದರ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು.

ಕೂಟೇಲು ಭಾಗಕ್ಕೆ ಸೇತುವೆ, ಕೊಯನಾಡು ಭೀಮ ಗುಂಡಿ ಭಾಗಕ್ಕೆ ಸೇತುವೆ, ಕಲ್ಯಾಳ ಭಾಗದ ರಸ್ತೆಯನ್ನು ಸಡಕ್ ರಸ್ತೆಯಾಗಿ ಸೇರ್ಪಡೆಗೊಳಿಸುವಂತೆ ಹಾಗೂ ಪಂಚಾಯಿತಿ ವ್ಯಾಪ್ತಿಯ ಇನ್ನಿತರ ರಸ್ತೆಗಳಿಗೆ ಹೆಚ್ಚಿನ ಅನುದಾನವನ್ನು ಸರಕಾರ ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಲಾಯಿತು.

ವಿದ್ಯುತ್ ಸಂಪರ್ಕಕ್ಕೆ ಅಡ್ಡಿಪಡಿಸುವ ಮರದ ಕೊಂಬೆಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡುವಂತೆಯೂ, ರಬ್ಬರ್ ತೋಟದ ಮಾಲೀಕರು ವಿದ್ಯುತ್ ಸಂಪರ್ಕಕ್ಕೆ ತಾಗುವ ಕೊಂಬೆಗಳನ್ನು ಕಡಿಯಲು ಸಹಕರಿಸುವಂತೆ ತೀರ್ಮಾನಿಸ ಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಲಚಂದ್ರ ಕಳಗಿ ಮಾತನಾಡಿ, ಸರಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಪಂಚಾಯಿತಿಯು ಆಡಳಿತಾತ್ಮಕವಾಗಿ ಒಳ್ಳೆಯ ಕೆಲಸ ನಿರ್ವಹಿಸುತ್ತಿದ್ದು, ಕೊಡಗಿನಲ್ಲಿ ಮಾದರಿ ಪಂಚಾಯಿತಿಯಾಗಿ ಬೆಳೆಯುತ್ತಿದೆ. ಗ್ರಾಮ ಅಭಿವೃದ್ಧಿ ಹೊಂದಲು ಎಲ್ಲರ ಸಹಕಾರ ಅಗತ್ಯವೆಂದು ತಿಳಿಸಿದರು. ಪಂಚಾಯಿತಿ ವತಿಯಿಂದ ರಸ್ತೆ ಇಲ್ಲದ ಕುಟುಂಬಗಳಿಗೆ ರಸ್ತೆ ನಿರ್ಮಾಣ ಮಾಡಲು ಜನರ ಸಹಕಾರದೊಂದಿಗೆ ರಸ್ತೆ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಕುಮಾರ್ ಮಾತನಾಡಿ, ಸರಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಗ್ರಾಮಕ್ಕೆ ನೀಡಲಾಗುವದು. ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಲಾಗುವದು ಎಂದು ತಿಳಿಸಿದರು. ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಸಂಪಾಜೆ ಪಂಚಾಯಿತಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪಂಚಾಯಿತಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಯಾಗುತ್ತಿಲ್ಲ. ಇದರಿಂದ ಹೆಚ್ಚಿನ ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರದ ಯೋಜನೆಯನ್ನು ಕಟ್ಟಕಡೆಯ ವ್ಯಕ್ತಿಗೂ ಕೂಡ ತಲಪಿಸಲು ಶ್ರಮ ವಹಿಸಲಾಗುವದು ಎಂದು ತಿಳಿಸಿದರು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಬಿ.ಆರ್. ಸುಂದರ, ಸದಸ್ಯರಾದ ಕುಮಾರ್ ಚೆದ್ಕಾರ್, ಯಮುನಾ ಗಿರೀಶ್, ಗಿರಿಜಾ ಮೋಹನ್, ಮಾಲತಿ ನಾರಾಯಣ, ಕೆ.ಕೆ. ರಾಜೇಶ್ವರಿ, ನೋಡೆಲ್ ಅಧಿಕಾರಿ ಸಿ.ಎಂ. ಪ್ರಮೋದ್, ಪಿ.ಡಿ.ಓ. ಪಿ.ಎಲ್. ಶೋಭಾರಾಣಿ ಉಪಸ್ಥಿತರಿದ್ದರು. ಲಸಿತಾ ಪ್ರಾರ್ಥಿಸಿ, ಪಿಡಿಓ ಸ್ವಾಗತಿಸಿ, ಕುಮಾರ್ ಚೆದ್ಕಾರ್ ವಂದಿಸಿದರು.