ನಾಪೋಕ್ಲು, ಅ. 24: ನಾಪೋಕ್ಲು - ಬೆಟ್ಟಗೇರಿ ಮುಖ್ಯರಸ್ತೆಯಲ್ಲಿ ಕೊಟ್ಟಮುಡಿ ಕೇಮಾಟ್‍ನಿಂದ ಬಕ್ಕ ಮಾರ್ಗವಾಗಿ ಸುಮಾರು ಮೂರು ಕಿಮೀ ದೂರ ಚಲಿಸಿದರೆ ಮಡಿಕೇರಿ-ಭಾಗಮಂಡಲ ಮುಖ್ಯರಸ್ತೆ ಸಿಗುವದರಿಂದ ಬೆಟ್ಟಗೇರಿಗಾಗಿ ಸುತ್ತು ಬಳಸಿ ಸಾಗುವ ಸಮಯ ಹಾಗೂ ಶ್ರಮ ಉಳಿತಾಯವಾಗುತ್ತಿತ್ತು, ಸ್ಥಳೀಯ ಗ್ರಾಮಸ್ಥರ ಬಹುನಿರೀಕ್ಷಿತ ಈ ರಸ್ತೆಗೆ ಕಳೆದ 4-5 ವರ್ಷದ ಹಿಂದೆ ಡಾಮರೀಕರಣಗೊಳಿಸಿದ್ದು ಸಾರ್ವ ಜನಿಕರ ಪ್ರಶಂಶೆಗೆ ಪಾತ್ರವಾಗಿತ್ತು. ಕಳೆದ ಎರಡು ವರ್ಷಗಳಿಂದ ರಸ್ತೆ ದುರಸ್ಥಿ ಮಾಡದೇ ಇದ್ದುದರಿಂದ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಗುಂಡಿಗಳಾಗಿದ್ದು ತೀವ್ರ ದುಸ್ಥಿತಿಗೊಳಗಾಗಿದೆ.

ನಾಪೋಕ್ಲುವಿನಿಂದ ಭಾಗಮಂಡಲಕ್ಕೆ ತೆರಳುವವರಿಗೆ ಈ ಸಂಪರ್ಕ ರಸ್ತೆಯು ಉಪಯೋಗ ವಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ರಸ್ತೆ ನಿರ್ಮಾಣ ಮಾಡಿದ್ದು ಭಾಗಮಂಡಲಕ್ಕೆ ತೆರಳುವವರಿಗೆ ಸಮೀಪದ ದಾರಿಯಾಗಿತ್ತು. ಇದೀಗ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಗಳಲ್ಲಿ ಕೆಸರು ತುಂಬಿ ವಾಹನಗಳು ಸಾಗುವದಿರಲಿ ಜನರು ನಡೆದಾಡು ವದು ದುಸ್ತರವಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಗಳಿಲ್ಲದೆ ಕೆಸರು ನೀರು ರಸ್ತೆಯ ಹೊಂಡಗಳಲ್ಲಿ ತುಂಬಿಕೊಂಡು ರಸ್ತೆ ಕಾಣದೇ ವಾಹನಗಳು ಅಪಾಯ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಪರ್ಕ ರಸ್ತೆಯ ಇಳಿಜಾರಿನಲ್ಲಿ ಸ್ವಲ್ಪ ದೂರ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು ಅವೈಜ್ಞಾನಿಕ ರೀತಿಯ ದಿಣ್ಣೆಗಳ ನಿರ್ಮಾಣದಿಂದ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ರಸ್ತೆ ದುಸ್ಥಿತಿಯಿಂದಾಗಿ ಬಹುತೇಕ ಯಾವದೇ ವಾಹನಗಳು ಈ ರಸ್ತೆಯಲ್ಲಿ ತೆರಳದೆ ಸಂಪರ್ಕ ಕಡಿತಗೊಂಡಿದ್ದು ರಸ್ತೆ ದುಸ್ಥಿತಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಜೀವಾಪಾಯ ಆಗುವ ಮುನ್ನ ನಿದ್ರ್ರಾವಸ್ಥೆಯಲ್ಲಿರುವ ಇಲಾಖೆ ರಸ್ತೆ ದುರಸ್ತಿ ಮಾಡಬೇಕಾಗಿದೆ. ಇಲ್ಲವಾದರೆ ಗ್ರಾಮಸ್ಥರು ತಮ್ಮ ಮೂಲಭೂತ ಸೌಲಭ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕಿದೆ. ಸಾರ್ವಜನಿಕರ ಸಹನೆ ಕಟ್ಟೆಯೊಡೆಯುವ ಮೊದಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ದುಗ್ಗಳ ಸದಾನಂದ