ಕೂಡಿಗೆ, ಡಿ. 19: ಕುಶಾಲನಗರ ಜಿಲ್ಲೆಯಲ್ಲಿ ಹೆಚ್ಚು ಬೆಳೆಯುತ್ತಿರುವ ವಾಣಿಜ್ಯ ಪಟ್ಟಣವಾಗಿದ್ದು, ದಿನಗಳು ಕಳೆದಂತೆ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ವಾಹನಗಳ ನಿಯಂತ್ರಣಕ್ಕೆ ಅನುಗುಣವಾಗಿ ಸಾರ್ವಜನಿಕರ ಬೇಡಿಕೆಯನ್ವಯ ಸರ್ಕಾರವು ಈಗಾಗಲೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಮಂಜೂರು ಮಾಡಿದ್ದು, ಕಳೆದ ವಾರ ದಿಂದ ಸಂಚಾರಿ ಠಾಣೆಯ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿವೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಗೆ ಸರ್ಕಾರದ ನಿಯಮಾನುಸಾರ 7 ಸಿಬ್ಬಂದಿಗಳ ನೇಮಕಗೊಂಡಿದ್ದು, ಒಬ್ಬರು ಎಎಸ್‍ಐ ಕಾರ್ಯನಿರ್ವಹಿಸುತ್ತಿದ್ದು ಇನ್ನು ಹೆಚ್ಚಿನ ಸಿಬ್ಬಂದಿಗಳು ಹಾಗೂ ಠಾಣಾಧಿಕಾರಿಯ ನೇಮಕ ಇನ್ನಷ್ಟೆ ಆಗಬೇಕಾಗಿದೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯು ನಗರ ಸೇರಿದಂತೆ ಕೊಡಗಿನ ಗಡಿಭಾಗ ಶಿರಂಗಾಲದ ಗಡಿಯವರೆಗೆ 6 ಗ್ರಾಮ ಪಂಚಾಯ್ತಿ ಒಳಗೊಂಡಂತೆ ಇತ್ತ ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡಿನವರೆಗೆ, ವೀರಾಜಪೇಟೆ ರಸ್ತೆಯ ನಂಜರಾಯಪಟ್ಟಣದವರೆಗೆ ಹಾಗೂ ಕೊಡಗಿನ ಹೆಬ್ಬಾಗಿಲು ಕೊಪ್ಪ ಗೇಟ್‍ವರೆಗೆ ಕಾರ್ಯವ್ಯಾಪ್ತಿಯಿದೆ. ಇದೀಗ ಸಂಚಾರಿ ಪೊಲೀಸ್ ಸಿಬ್ಬಂದಿ ಗಳು ಸಂಚಾರಿ ವ್ಯವಸ್ಥೆಗೆ ಅನುಕೂಲ ವಾಗುವಂತೆ ಆಯಾ ವ್ಯಾಪ್ತಿಗಳಲ್ಲಿ ರಸ್ತೆಗೆ ಬ್ಯಾರಿಗೇಟ್‍ಗಳ ಅಳವಡಿಕೆ, ವಾಹನ ಸವಾರರಿಗೆ ವೇಗದ ಮಿತಿಯಲ್ಲಿ ಚಲಿಸಲು ಸೂಚನೆಗಳನ್ನು ನೀಡುವ ಮೂಲಕ ಸಂಚಾರಿ ವ್ಯವಸ್ಥೆ ಯನ್ನು ಸುಗಮಗೊಳಿ ಸುತ್ತಿದ್ದಾರೆ. ಈ ವ್ಯವಸ್ಥೆಗೆ ಸಾರ್ವಜನಿ ಕರು ಹಾಗೂ ವಾಹನ ಸವಾರರ ಸಹಕಾರ ಮುಖ್ಯ ವಾಗಿರುತ್ತದೆ. ಸಂಚಾರಿ ಪೊಲೀಸ್ ಠಾಣೆಯೊಂದಿಗೆ ಸಾರ್ವಜನಿಕರು ನಿಯಮಗಳನ್ನು ಪಾಲಿಸಿ, ಸಹಕಾರ ನೀಡಬೇಕೆಂದು ಸಂಚಾರಿ ಪೊಲೀಸ್ ಠಾಣೆಯ ಉಸ್ತುವಾರಿ ಠಾಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ..