ಕುಶಾಲನಗರ, ಸೆ. 1: ಮಹಿಳೆ ಯರು ತಮ್ಮನ್ನು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಸಾಮಾಜಿಕ ಜ್ಞಾನ ವೃದ್ಧಿಸಿಕ್ಕೊಳ್ಳುವದ ರೊಂದಿಗೆ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಕುಶಾಲನಗರ ಪೊಲೀಸ್ ಉಪ ಅಧೀಕ್ಷಕ ಟಿ. ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ಕುಶಾಲನಗರ ಎ ಮತ್ತು ಬಿ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘ-ಸಂಸ್ಥೆಗಳಲ್ಲಿ ಮಹಿಳೆಯರು ತೊಡಗಿಸಿಕೊಂಡು ಸದೃಢರಾಗಿ ಸಾಂಸಾರಿಕ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಸಫಲರಾಗುತ್ತಿದ್ದಾರೆ. ಈ ಸಾಮಥ್ರ್ಯದ ಮೂಲಕ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಸಾಧನೆಗೈಯುತ್ತಿರುವದು ಕಾಣಬಹುದಾಗಿದೆ. ಮಹಿಳೆಯರು ಸಂಘಟಿತರಾಗಿ ಸಾಮಾಜಿಕ ವ್ಯವಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಡಯಟ್ ಉಪನ್ಯಾಸಕಿ ಸಾವಿತ್ರಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿ ದ್ದಾರೆ. ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಾಲೋಚನೆ, ಚರ್ಚೆ ಹಾಗೂ ಸ್ವಂತ ತೀರ್ಮಾನಗಳ ಮೂಲಕ ವಿಕಸಿತರಾಗುತ್ತಿರುವದು ಉತ್ತಮ ಬೆಳವಣಿಗೆ ಎಂದರು.

ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸರಿಸಮಾನವಾದ ಗೌರವ ಹಾಗೂ ಮಾನ್ಯತೆ ದೊರಕಿದಲ್ಲಿ ಮಾತ್ರ ಮಹಿಳೆ ಸಬಲೀಕರಣ ಸಾಧ್ಯ ಎಂದ ಅವರು ಯೋಜನೆಯ ಮೂಲಕ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ ಎಂದರು. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಹಾರ ಸಂರಕ್ಷಣಾ ಅಭಿಯಾನ ಸಂಚಾಲಕ ಎನ್.ಕೆ. ಮೋಹನ್ ಕುಮಾರ್, ನಂಜರಾಯಪಟ್ಟಣದ ಸಮಾಜ ಸೇವಕಿ ಮುತ್ತಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಇದೇ ಸಂದರ್ಭ ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಾಯಿತು. ಯೋಜನೆಯ ಮೇಲ್ವಿಚಾರಕ ಚಂದ್ರಶೇಖರ್, ಸೇವಾ ಪ್ರತಿನಿಧಿಗಳಾದ ಚಂದ್ರಾವತಿ, ವಿಜಯಲಕ್ಷ್ಮಿ, ಡಾಟಿ, ಕೀರ್ತನಾ, ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು ಇದ್ದರು. ರೂಪ ಪ್ರಾರ್ಥಿಸಿ ದರು, ಸುಪ್ರಿತಾ ಒಕ್ಕೂಟದ ವರದಿ ವಾಚಿಸಿದರು.