ಕೂಡಿಗೆ, ಆ. 27: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಬೃಂದಾವನಕ್ಕೆ ಈಗಾಗಲೇ ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿರುವ ಈ ಸಂದರ್ಭದಲ್ಲಿ ಜಿಲ್ಲೆಗೆ ಧಾವಿಸುವ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುವಂತೆ ಹಾಗೂ ಮನರಂಜನೆಗೆ ಸಹಕಾರಿಯಾಗುವಂತೆ ಹಾರಂಗಿ ಅಣೆಕಟ್ಟೆಯ ಬೃಂದಾವನದ ಕೇಂದ್ರದಲ್ಲಿ ಅತ್ಯಾಧುನಿಕ ತಾಂತ್ರಿಕತೆಯುಳ್ಳ ಸಂಗೀತ ಕಾರಂಜಿಯನ್ನು ಅಳವಡಿಸಲು ಇಲಾಖೆಯ ವತಿಯಿಂದ ರೂ. 2 ಕೋಟಿ 49 ಲಕ್ಷ ಆಡಳಿತತ್ಮಾಕವಾಗಿ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಮಂಜೂರಾತಿಯ ನಂತರ ಕಾಮಗಾರಿಯು ಪ್ರಾರಂಭಗೊಳ್ಳಲಿದೆ.

ದೇಶದ ಅತ್ಯುನ್ನತ ಹೆಚ್ಚು ತಾಂತ್ರಿಕ, ವಿದ್ಯುದೀಕರಣದ ಈ ಸಂಗೀತ ಕಾರಂಜಿಯು ಅರ್ಧ ಗಂಟೆಯ ಸಮಯ ಸಂಗೀತದ ಹಾಡುಗಳನ್ನು ಅಳವಡಿಸಿ, ನೀರನ್ನು ಚಿಮ್ಮಿಸುವ ಮೂಲಕ ನೃತ್ಯದ ರೂಪಕವಾಗಿ ನೋಡುಗರಿಗೆ ಸಂತೋಷವನ್ನುಂಟು ಮಾಡುವ ಮಾದರಿಯಲ್ಲಿ ಹಾಗೂ ಇದರ ವೀಕ್ಷಣೆಗೆ ಅನುಕೂಲವಾಗುವಂತೆ ಸಂಗೀತ ಕಾರಂಜಿಯನ್ನು ಬೃಂದಾವನದ ಆವರಣದಲ್ಲಿ 200 ಜನ ಕುಳಿತು ವೀಕ್ಷಣೆ ಮಾಡುವ ರೀತಿಯ ಹೊಸ ಹೊಸ ತಾಂತ್ರಿಕತೆಯ ಜೋಡಣೆಯ ಮೂಲಕ ಯಾಂತ್ರೀಕೃತ ಯಂತ್ರಗಳನ್ನು ಅಳವಡಿಸಿ, ನಿರ್ಮಾಣಗೊಳಿಸಲು ಹಣ ಮಂಜೂರಾಗಿದೆ ಎಂದು ಹಾರಂಗಿ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ತಿಳಿಸಿದ್ದಾರೆ.

ಈ ನೂತನ ತಂತ್ರಗಾರಿಕೆಯ ಸಂಗೀತ ಕಾರಂಜಿಯು ಕೆಆರ್‍ಎಸ್‍ಗಿಂತಲೂ ಹೆಚ್ಚು ಹೊಸ ಯಂತ್ರಗಳನ್ನು ಅಳವಡಿಸುವ ಮೂಲಕ ಪ್ರವಾಸಿಗರಿಗೆ ಸಂಗೀತದ ರಸದೌತಣವನ್ನು ನೀಡುವ ಹಾಗೂ ಪ್ರವಾಸಿಗರನ್ನು ಬೃಂದಾವನದತ್ತ ಸೆಳೆಯುವ ಯೋಜನೆಗೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಈಗಾಗಲೇ ಅನುಮೋದನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳುವ ಕಾರ್ಯದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜ್, ಸಹಾಯಕ ಇಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.