ಭಾಗಮಂಡಲ, ಅ. 24: ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಹೂಳೆತ್ತುವ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ಮಣ್ಣು ಮಿಶ್ರಿತ ಮರಳನ್ನು ಯಾವದೇ ಅನುಮತಿ ಇಲ್ಲದೆ ಸಾಗಾಟ ಮಾಡಲು ಯತ್ನಿಸುತ್ತಿದ್ದುದನ್ನು ತಡೆದು ಗ್ರಾಮಸ್ಥರು ಈ ಸಂಬಂಧ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆದಿದೆ.ಕಳೆದ ವರ್ಷ ಸಂಗಮದಲ್ಲಿ ಹೂಳೆತ್ತುವ ಸಂದರ್ಭ ದೊರೆತ ಮರಳು ಮಿಶ್ರಿತ ಮಣ್ಣನ್ನು ಒಂದೆಡೆ ರಾಶಿ ಹಾಕಲಾಗಿತ್ತು. ದೇವಾಲಯ ಸಮಿತಿ ವತಿಯಿಂದ ಹೂಳೆತ್ತಿ ಅದರಲ್ಲಿ ದೊರೆತ ಮರಳನ್ನು ಒಂದು ಪಿಕ್ಅಪ್ಗೆ ರೂ. 1000 ದಂತೆ ನಿಗದಿ ಮಾಡಿ ಮಾರಾಟ ಮಾಡಲಾಗಿತ್ತು. ಸುಮಾರು 100ಕ್ಕೂ ಅಧಿಕ ಲೋಡ್ ಮರಳು ಸಂಗ್ರಹವಾಗಿದ್ದು, ರೂ. 1 ಲಕ್ಷದಷ್ಟು ಆದಾಯ ಬಂದಿತ್ತು. ಆದರೆ ಈ ಬಾರಿ ದೇವಾಲಯ ಸಮಿತಿ ಬದಲಿಗೆ ಜಿಲ್ಲಾಡಳಿತದ ವತಿಯಿಂದ ಹೂಳೆತ್ತಬೇಕೆಂದು ಸಾರ್ವಜನಿಕರು ಒತ್ತಾಯಿಸಿದ ಮೇರೆಗೆ ಜಿಲ್ಲಾಡಳಿತದ ವತಿಯಿಂದ ಹೂಳೆತ್ತಿ ನೂರಕ್ಕೂ ಅಧಿಕ ಲೋಡ್ ಮರಳನ್ನು ರಾಶಿ ಹಾಕಲಾಗಿತ್ತು. ಇದೀಗ ಇಂದು ದಿಢೀರನೇ
(ಮೊದಲ ಪುಟದಿಂದ) ಲಾರಿಗಳನ್ನು ತಂದು ಮರಳು ಸಾಗಾಟ ಮಾಡುತ್ತಿರುವದು ಗೋಚರಿಸಿದೆ. ದಿಢೀರ್ ಪ್ರಕ್ರಿಯೆಯನ್ನು ಗಮನಿಸಿದ ಗ್ರಾ.ಪಂ. ಸದಸ್ಯ ಭಾಸ್ಕರ, ಗ್ರಾಮಸ್ಥರಾದ ಅಮೆ ಪದ್ಮಯ್ಯ, ಕೀರ್ತಿ ಇನ್ನಿತರರು ಪ್ರಶ್ನಿಸಿದ್ದಾರೆ. ಈ ಸಂದರ್ಭ ಮರಳು ಕೊಂಡೊಯ್ಯಲು ಬಂದಿದ್ದವರು ನಿರ್ಮಿತಿ ಕೇಂದ್ರದವರ ಸೂಚನೆಯಂತೆ ಬಂದಿದ್ದು, ತಮಗೆ ಅಪರ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಉತ್ತರಿಸಿದ್ದಾರೆ. ಪರಿಶೀಲಿಸಿದಾಗ ಅವರ ಬಳಿ ಯಾವದೇ ಅನುಮತಿ ಪತ್ರ ಇರಲಿಲ್ಲ. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಭಾಗಮಂಡಲ ಕಂದಾಯಾಧಿಕಾರಿ ಸರಕಾರದ ಸ್ವತ್ತಾಗಿದ್ದು, ಎಲ್ಲಿಗೆ ಬೇಕಾದರೂ ಕೊಂಡೊಯ್ಯ ಬಹುದೆಂದು ಸಾರ್ವಜನಿಕರಿಗೆ ಧಮಕಿ ಹಾಕಿದ್ದಾರೆ. ಇದರಿಂದ ಉದ್ರಿಕ್ತರಾದ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರ ಮುಖೇನ ಮಾಹಿತಿ ಅರಿತ ಭಾಗಮಂಡಲಕ್ಕೆ ಬಂದಿದ್ದ ತಹಶೀಲ್ದಾರರು ಸ್ಥಳಕ್ಕೆ ತೆರಳಿದ್ದಾರೆ. ಯಾವದೇ ಅನುಮತಿ ಇಲ್ಲದೆ ಮರಳನ್ನು ಕೊಂಡೊಯ್ಯಲು ಬಿಡುವದಿಲ್ಲವೆಂದು ಪಟ್ಟು ಹಿಡಿದ ಗ್ರಾಮಸ್ಥರು ಮರಳು ಸಾಗಾಟವನ್ನು ತಡೆಹಿಡಿದಿದ್ದಾರೆ. ತಲಕಾವೇರಿಯಲ್ಲಿ ಶೌಚಾಲಯ, ಮಡಿಕೇರಿಯಲ್ಲಿ ದೇವಾಲಯ ಹಾಗೂ ಆಸ್ಪತ್ರೆ ಕಾಮಗಾರಿಗೆ ಮರಳು ಕೊಂಡೊಯ್ಯುತ್ತಿದ್ದುದಾಗಿ ತಿಳಿದು ಬಂದಿದೆ.
ಸರಕಾರದಿಂದಲೇ ಕಳಪೆ?
‘ಸಂಗಮದಲ್ಲಿ ಸಂಗ್ರಹವಾಗಿರುವ ಮರಳು ಮಣ್ಣು ಮಿಶ್ರಿತವಾಗಿದೆ. ಶುದ್ಧೀಕರಣವಾಗಿಲ್ಲ, ಇಂತಹ ಮರಳನ್ನು ಸರಕಾರದ ಅಧೀನ ಸಂಸ್ಥೆ ಕೊಂಡೊಯ್ದು ಅದರಲ್ಲಿ ಕಟ್ಟಡ ನಿರ್ಮಿಸಿದರೆ ಹೇಗಾಗಬಹುದು, ಸರಕಾರದಿಂದಲೇ ಕಳಪೆ ಕಾಮಗಾರಿ ಮಾಡುವ ಹುನ್ನಾರವೇ’? ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಅಭಿಪ್ರಾಯಿಸಿದ್ದಾರೆ.