ಮಡಿಕೇರಿ, ಡಿ.2 :ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣ ದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ತಾ.5 ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿಯ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿ ಯಿಂದ ಜರುಗಲಿದೆ ಎಂದು ಶ್ರೀಮುತ್ತಪ್ಪ ದೇವಾಲಯ ಉತ್ಸವ ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಟಿ.ಕೆ.ಸುಧೀರ್, ದೇವಾಲಯದ ಆವರಣದಲ್ಲಿ ದೇವಾಲಯದಲ್ಲಿ ಅಂದು ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ ಸೇವೆ, ಕ್ಷೀರಾಭಿಷೇಕ, ಅಪ್ಪಂಸೇವೆ, ಪಂಚಕಜ್ಜಾಯ ಸೇವೆ, ಹಣ್ಣುಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ, ತಾಯಂಬಕ ಸೇವೆಯ ನಂತರ ಮಹಾಮಂಗಳಾರತಿ ನಡೆಯಲಿದೆ. ಬೆಳಿಗ್ಗೆ 8.30 ಗಂಟೆಯಿಂದ ಶ್ರೀಮುತ್ತಪ್ಪ ದೇವರ ವೆಳ್ಳಾಟಂ ಜರುಗಲಿದ್ದು, ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಾ.4 ರಂದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರಪಾಲ ಹಾಗೂ ಬದ್ರಪೀಠ ಪ್ರತಿಷ್ಠಾಪನೆ ನಡೆಯಲಿದೆ. ಸುಮಾರು 6 ರಿಂದ 7 ಸಾವಿರ ಭಕ್ತರನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿರುವ ಅವರು ಭಕ್ತಾದಿಗಳು ಆರ್ಥಿಕ ನೆರವು ಅಥವಾ ಅನ್ನದಾನಕ್ಕೆ ಅಗತ್ಯವಿರುವ ವಸ್ತುಗಳ ನೆರವನ್ನು ನೀಡಬಹುದೆಂದು ಹೇಳಿದರು.

ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು, ಮುಂದೆ ಪೌಳಿ ನಿರ್ಮಾಣದ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ : 94484 06534, 94485 04690, 94481 35592 ಸಂಖ್ಯೆಗಳ್ನು ಸಂಪರ್ಕಿಸ ಬಹುದಾಗಿದೆ ಎಂದರು. ಸುದ್ದಿಗೋಷ್ಠಿ ಯಲ್ಲಿ ಉತ್ಸವ ಸಮಿತಿಯ ಪ್ರಮುಖರಾದ ಎನ್.ವಿ.ಉಣ್ಣಿಕೃಷ್ಣ ಹಾಗೂ ಸುರೇಶ್ ಕುಮಾರ್ ಉಪಸ್ಥಿತರಿದ್ದರು.