ಶ್ರೀಮಂಗಲ, ಸೆ. 28: ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2015-16ನೇ ಸಾಲಿನಲ್ಲಿ ರೂ. 39.70 ಲಕ್ಷ ನಿವ್ವಳ ಲಾಭಗಳಿಸಿರುವದಾಗಿ ಸಂಘದ ಅಧ್ಯಕ್ಷ ಎ.ಎಸ್ ಕರುಂಬಯ್ಯ ತಿಳಿಸಿದರು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 2015-16ನೇ ಸಾಲಿನಲ್ಲಿ ರೂ. 104.69 ಕೋಟಿ ವಾರ್ಷಿಕ ವಹಿವಾಟು ನಡೆಸಿದೆ. 2022 ಜನ ಸದಸ್ಯರಿದ್ದು ರೂ. 1.08 ಕೋಟಿ ಪಾಲು ಬಂಡವಾಳ ಹೊಂದಿದೆ. ರೂ. 12.35 ಕೋಟಿ ಠೇವಣಿ, ರೂ. 4.62 ಕೋಟಿ ರಸಗೊಬ್ಬರ, ಹತ್ಯಾರು ಹಾಗೂ ಪಡಿತರ ಆಹಾರ ಧಾನ್ಯ ಮಾರಾಟ ಮಾಡಿ ರೂ. 25.21 ಲಕ್ಷ ವ್ಯಾಪಾರ ಲಾಭಗಳಿಸಿದೆ. ಸಂಘದ ಮೂಲಕ ಕೃಷಿ ಸಾಲ ರೂ. 8.40 ಕೋಟಿ, ಕೃಷಿಯೇತರ ಸಾಲ ರೂ. 11.23 ಕೋಟಿ ಒಟ್ಟು ರೂ. 19.63 ಕೋಟಿ ಸಾಲ ವಿತರಿಸಿದೆ.

ಎಲ್ಲಾ ವರ್ಗದ ಸದಸ್ಯರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ವಿವಿಧ ಯೋಜನೆಗಳ ಅನುಷ್ಠಾನ ಮಾಡುವಂತೆ ಸದಸ್ಯರು ಮನವಿ ಮಾಡಿದ್ದು ಹಂತ ಹಂತವಾಗಿ ಅನುಷ್ಠಾನಗೊಳಿಸುವದಾಗಿ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಂದೀಪ್, ನಿರ್ದೇಶಕರುಗಳಾದ ಅಜ್ಜಮಾಡ ಕೆ. ಚಂಗಪ್ಪ, ಎಸ್.ಬಿ. ಪರಶಿವ, ಅಲ್ಲುಮಾಡ ಡಿ. ಮುಕುಂದ, ಬಿ.ಎಸ್. ಪುರುಷೋತ್ತಮ್, ಹೆಚ್.ಎನ್. ಕೇತು, ಅರೆಯಡ ಟಿ. ಬೊಳ್ಳಮ್ಮ, ಚೆಟ್ಟಂಗಡ ಕೆ. ಗೀತಾ, ಕಾಳಿಮಾಡ ಎ. ಪ್ರಶಾಂತ್, ಕೆ.ಡಿ.ಸಿ.ಸಿ. ಬ್ಯಾಂಕಿನ ಮೇಲ್ವಿಚಾರಕ ಬಿ.ಎನ್. ಶರೀನ್ ಕುಮಾರ್, ಪ್ರಬಾರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿ.ಎಸ್. ಸುಶೀಲ ಹಾಜರಿದ್ದರು.

ಸಂಘದ ನೌಕರರಾದ ಬಿ.ಎಸ್. ಮುತ್ತಪ್ಪ ಪ್ರಾರ್ಥಿಸಿ, ಅಧ್ಯಕ್ಷ ಎಸ್. ಕರುಂಬಯ್ಯ ಸ್ವಾಗತಿಸಿ, ನೌಕರ ಎಂ.ಬಿ. ನಾಗೇಶ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಕೆ.ಎನ್. ಸಂದೀಪ್ ವಂದಿಸಿದರು.