ಶ್ರೀಮಂಗಲ, ಆ. 24: ಶ್ರೀಮಂಗಲ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಅಡಚಣೆ ತಪ್ಪಿಸಲು ನೂತನ ಫೀಡರ್ ಅಳವಡಿಸಲು ಇಲಾಖೆ ಯಿಂದ ಮಂಜೂರಾಗಿದ್ದರೂ, ಇದರ ಕಾಮಗಾರಿ ಕಳೆದ 8 ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದು, 10 ದಿನದೊಳಗೆ ನೂತನ ಫೀಡರ್ ಅಳವಡಿಸುವ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯುತ್ ಅಡಚಣೆ ಸಮಸ್ಯೆಯನ್ನು ಸರಿಪಡಿಸದಿದ್ದರೆ ಸೆಪ್ಟಂಬರ್ 5ಕ್ಕೆ ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವದಾಗಿ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಶ್ರೀಮಂಗಲ ಪಟ್ಟಣವು ಶೀಘ್ರವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಶ್ರೀಮಂಗಲ ಪಟ್ಟಣಕ್ಕೆ 30 ರಿಂದ 40 ಕಿ.ಮೀ ದೂರವಿರುವ ಬಿರುನಾಣಿ-ಪರಕಟಗೇರಿ ಹಾಗೂ ಕಾನೂರು ವಿದ್ಯುತ್ ಮಾರ್ಗದ ಫೀಡರ್‍ಗಳ ಮೂಲಕ ಇದುವರೆಗೂ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿದೆ. ಇದರಿಂದ ಬಿರುನಾಣಿ-ಪರಕಟಗೇರಿ ಹಾಗೂ ಕಾನೂರು ವಿದ್ಯುತ್ ಮಾರ್ಗದ ನಡುವೆ ಎಲ್ಲಿಯಾದರೂ ಅಡಚಣೆ ಉಂಟಾದರೆ ಹಾಗೂ ದುರಸ್ತಿಗಾಗಿ ವಿದ್ಯುತ್ ಕಡಿತ ಮಾಡುವ ಸಂದರ್ಭ ಶ್ರೀಮಂಗಲ ಪಟ್ಟಣದಲ್ಲಿ ಯೂ ವಿದ್ಯುತ್ ಕಡಿತವಾಗುತ್ತದೆ. ಆದ್ದರಿಂದ ಪಟ್ಟಣಕ್ಕೆ ಸೀಮಿತವಾಗು ವಂತೆ ಪ್ರತ್ಯೇಕ ಫೀಡರ್ ಅಳವಡಿಸಿ ಈ ಸಮಸ್ಯೆ ಪರಿಹರಿಸಲು ಕಳೆದ 3-4 ವರ್ಷದಿಂದ ಇಲಾಖೆಯೊಂದಿಗೆ ಪ್ರಯತ್ನಿಸಲಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಕಳೆದ 8 ತಿಂಗಳ ಹಿಂದೆ ಪ್ರತ್ಯೇಕ ಫೀಡರ್ ಸೆಸ್ಕ್ ಇಲಾಖೆಯಿಂದ ಮಂಜೂರಾಗಿದ್ದು ಗುತ್ತಿಗೆದಾರ ಶಶಿ ಕುಮಾರ್ ಕಾಮಗಾರಿ ಕೈಗೆತ್ತಿ ಕೊಂಡಿದ್ದಾರೆ. ಆದರೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚೇಂಬರ್ ಆಫ್ ಕಾಮರ್ಸ್‍ನ ಕಾರ್ಯದರ್ಶಿ ಚೋನೀರ ಕಾಳಯ್ಯ ಮಾತನಾಡಿ ಶ್ರೀಮಂಗಲ ಸೆಸ್ಕ್ ಶಾಖಾಧಿಕಾರಿ ವಿಜಯ್ ಕುಮಾರ್ ಅವರನ್ನು ಈ ಬಗ್ಗೆ ವಿಚಾರಿಸಲಾಗಿದೆ. ಫೀಡರ್ ಅಳವಡಿಸಿ ವಿದ್ಯುತ್ ಸಂಪರ್ಕ ಅಳವಡಿಸಲು ಕೇಬಲ್ ಹಾಗೂ ಫೀಡರ್‍ಗಿರುವ ಸಿ.ಟಿ ಇತರ ಉಪಕರಣಗಳು ಲಭ್ಯವಾಗದೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಶ್ರೀಮಂಗಲ ಪಟ್ಟಣದಲ್ಲಿ ನಾಡ ಕಚೇರಿ, ಬಿ.ಎಸ್.ಎನ್.ಎಲ್. ದೂರವಾಣಿ ಕೇಂದ್ರ, ಆಸ್ಪತ್ರೆ, ಅಕ್ಕಿಗಿರಣಿ, ಜೆರಾಕ್ಸ್, ಇಂಟರ್ನೆಟ್, ಹಾಗೂ ಶೀತಲೀಕರಣ ಮಾಂಸ ಮಾರಾಟ ಇತ್ಯಾದಿಗಳಿಗೆ ವಿದ್ಯುತ್ ಅಡಚಣೆಯಿಂದ ತೊಂದರೆ ಉಂಟಾಗುತ್ತಿದೆ. ಮುಂದಿನ 10 ದಿನದೊಳಗೆ ಫೀಡರ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡದಿದ್ದರೆ ಸೆಪ್ಟೆಂಬರ್ 5 ರಂದು ಸ್ಥಳೀಯ ವರ್ತಕರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಬೆಂಬಲ ಪಡೆದು ಚೇಂಬರ್ ಆಫ್ ಕಾಮರ್ಸ್‍ನಿಂದ ಶ್ರೀಮಂಗಲದ ವಿದ್ಯುತ್ ಕೇಂದ್ರದ ಎದುರು ಪ್ರತಿಭಟನೆ ಹಮ್ಮಿಕೊಳ್ಳುವ ದಾಗಿ ಎಚ್ಚರಿಸಿದರು.

ಗೋಷ್ಠಿಯಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಸದಸ್ಯರುಗಳಾದ ಕೋಳೇರ ಬಾಬು, ಕೆ.ವಿ. ವೇಣು, ಹಾಜರಿದ್ದರು.