ಶ್ರೀಮಂಗಲ, ಅ. 15: ಶ್ರೀಮಂಗಲ-ಕುಟ್ಟ ರಾಜ್ಯ ಹೆದ್ದಾರಿ ನಡುವೆ ಕಾಕೂರು ಜಂಕ್ಷನ್ ತಿರುವಿನಲ್ಲಿ ರಸ್ತೆ ಅಂಚಿನಲ್ಲಿ ದೊಡ್ಡ ಹೊಂಡ ಉಂಟಾಗಿದೆ. ಇಲ್ಲಿ ಹಲವಾರು ವಾಹನಗಳು ಹೊಂಡಕ್ಕೆ ಬಿದ್ದು ಅಪಘಾತವಾಗಿದ್ದು, ವಾಹನ ಸಂಚಾರದ ಸುರಕ್ಷತೆ ಹಾಗೂ ಮುನ್ನಚ್ಚರಿಕೆಗಾಗಿ ಶ್ರೀಮಂಗಲ ವಾಹನ ಚಾಲಕರು ಹಾಗೂ ಕಟ್ಟಡ ಕಾರ್ಮಿಕರು ರಸ್ತೆ ಬದಿಯಲ್ಲಿ ಕಂಬಗಳನ್ನು ನೆಟ್ಟು ರಿಫ್ಲೆಕ್ಟರ್ ಅಳವಡಿಸಿ ಎಚ್ಚರಿಕೆ ಫಲಕವನ್ನು ಹಾಕಿದ್ದಾರೆ.
ಈ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಅಲ್ಲದೇ ಕೇರಳ ರಾಜ್ಯಕ್ಕೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗದಲ್ಲಿ ಪ್ರಯಾಣಿಕರ ಬಸ್ ಸೇರಿದಂತೆ ಭಾರೀ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತದೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಸರಣಿ ಅಪಘಾತವಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ 4-5 ಅಪಘಾತವಾಗಿದೆ. ಈ ಅಪಾಯಕಾರಿ ತಿರುವಿನಲ್ಲಿ ಹೊಂಡದ ಅರಿವಿಲ್ಲದೆ ಸಂಚರಿಸುವಾಗ ಸಂಭವಿಸಬಹುದಾದ ಅಪಘಾತದ ಬಗ್ಗೆ ಮುನ್ನೆಚ್ಚರಿಕೆ ಕ್ರಮವನ್ನು ವಾಹನ ಚಾಲಕರು ಸ್ವಯಂ ಪ್ರೇರಿತರಾಗಿ ಮಾಡಿದರು.
ತಾತ್ಕಾಲಿಕ ವ್ಯವಸ್ಥೆ ಮಾಡಿರುವ ಇವರು ಸಂಬಂಧಪಟ್ಟ ಇಲಾಖೆ ಇಲ್ಲಿ ಶಾಶ್ವತವಾದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭ ಚಾಲಕರ ಸಂಘದ ಅಧ್ಯಕ್ಷ ಮುರುಳಿ, ಪಧಾದಿಕಾರಿಗಳಾದ ಜಾನ್ಸನ್ ಚಂಗಪ್ಪ, ಚಂದ, ಪುನೀತ್, ವಿನೇಶ್, ಶಿಜು, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕಾಕೂರು ಶಾಜಿ ಹಾಜರಿದ್ದರು.