ವೀರಾಜಪೇಟೆ, ಆ. 12: ಧರ್ಮವು ಅಪ್ಪಟ ಅಪರಂಜಿ ಚಿನ್ನ ಇದ್ದ ಹಾಗೆ. ಧರ್ಮದಲ್ಲಿ ಮೇಲು ಕೀಳು ಎಂಬ ಭೇದ ಭಾವ ಇರುವದಿಲ್ಲ ಎಂದು ಆಕಾಶವಾಣಿ ಉಧ್ಘೋಷÀಕ ಸುಬ್ರಾಯ ಸಂಪಾಜೆ ಹೇಳಿದರು.
ಕಾವೇರಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಪೂಜಾ ಕಾರ್ಯಕ್ರಮಗಳು, ಹಬ್ಬಗಳು ಯಾವುದೇ ತಾರತಮ್ಯ, ಭೇದ, ಭಾವಗಳಿಲ್ಲದೆ ಭಾಗವಹಿಸುವಿಕೆ ನಿಜವಾದ ಅರ್ಥವನ್ನು ಕೊಡುತ್ತದೆ. ಹೆಣ್ಣು ಮಕ್ಕಳ ಜೀವನದಲ್ಲಿ ಧಾರ್ಮಿಕತೆಯ ಶ್ರದ್ದೆ ಇದ್ದರೆ ವೃತಾಚರಣೆಗಳು ಆಧ್ಯಾತ್ಮಿಕ ಶಕ್ತಿಯನ್ನು ತೋರುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯೆ ಕಾಂತಿ ಸತೀಶ್ ಮಾತನಾಡಿ, ಸಮಾಜದಲ್ಲಿ ಓರ್ವ ವ್ಯಕ್ತಿ ಯಾವ ರೀತಿ ಬದುಕಲು ಸಾಧ್ಯವಿದೆ ಎಂಬುದನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುತ್ತಿದೆ. ಹಬ್ಬ ಹರಿದಿನಗಳನ್ನು ಆಚರಿಸುವುದರಿಂದ ಮನಸ್ಸಿನಲ್ಲಿರುವ ಕೆಟ್ಟ ಭಾವನೆಗಳನ್ನು ದೂರ ಮಾಡುತ್ತದೆ. ಪೂಜೆ ಪುನಸ್ಕಾರಗಳು ಅಂತರಾತ್ಮದಿಂದ ಬರಬೇಕೆ ಹೊರತು ತೋರ್ಪಡಿಕೆಯ ಕಾರ್ಯಕ್ರಮ ಗಳಾಗಬಾರದು ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ತೋರ್ಪಡಿಕೆಯ ಬದುಕಿಗಿಂತ ವಾಸ್ತವ ಬದುಕಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಉತ್ತಮ. ವೃತಗಳನ್ನು ಮಾಡುವಾಗ ಉದ್ದೇಶಗಳಿರಬೇಕು. ನಮ್ಮ ಪೂರ್ವಿಕರು ಮಾಡಿರುವ ಆಚರಣೆಗಳು ಅರ್ಥಪೂರ್ಣವಾಗಿದೆ. ನಾವುಗಳು ಸ್ವಾರ್ಥ ಜೀವನವನ್ನು ನಡೆಸುತ್ತಿದ್ದೇವೆ. ನಮಗೆ ಜನ್ಮಕೊಟ್ಟ ತಾಯಿ, ನಾವು ಜನ್ಮ ಕೊಟ್ಟ ಮಕ್ಕಳು ನಮಗೆ ದೇವರುಗಳಾಗುತ್ತಾರೆ. ಒರ್ವ ವ್ಯಕ್ತಿ ತನ್ನ ಜೀವನದ ಸಾರ್ಥಕತೆಯನ್ನು ಅರಿತುಕೊಂಡರೆ ಸಮಾಜವನ್ನು ಪರಿವರ್ತನೆ ಮಾಡಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಜನ ಜಾಗೃತಿ ಸಮಿತಿ ಅಧ್ಯಕ್ಷ ಬಾನಂಗಡ ಅರುಣ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪೂಜಾ ಸಮಿತಿ ಅಧ್ಯಕ್ಷೆ ಲಕ್ಷ್ಮಿ, ಜ್ಞಾನ ವಿಕಾಸ ಮೇಲ್ವಿಚಾರಕಿ ಸಪ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಖಾ ಗಣೇಶ್ ಸ್ವಾಗತಿಸಿ ವಲಯ ಮೇಲ್ವಿಚಾರಕ ರವಿಂದ್ರ ಕಾರ್ಯಕ್ರಮ ನಿರೂಪಿಸಿದರು.