ಕುಶಾಲನಗರ, ಡಿ. 3: ಉತ್ತರ ಕೊಡಗಿನ ಹೆಬ್ಬಾಲೆ ಗ್ರಾಮದಲ್ಲಿ ನಡೆದ ಗ್ರಾಮದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಹಬ್ಬ ಹರಿದಿನಗಳು ಪರಸ್ಪರ ಪ್ರೀತಿ, ವಾತ್ಸಲ್ಯ ಹಾಗೂ ಸೌಹಾರ್ದತೆಯನ್ನು ಬೆಸೆಯುತ್ತವೆ ಎಂದರು. ಐಎನ್‍ಟಿಯುಸಿ ಕಾರ್ಮಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಎಂ.ಎನ್. ಮುತ್ತಪ್ಪ ಮಾತನಾಡಿ, ಗ್ರಾಮದಲ್ಲಿ ಎಲ್ಲಾ ಜನರು ಒಟ್ಟಾಗಿ ಗ್ರಾಮದೇವತೆ ಬನಶಂಕರಿ ದೇವಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವದು ಸಂತೋಷದ ವಿಚಾರ. ಇದರಿಂದ ಗ್ರಾಮದಲ್ಲಿ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಿದೆ ಎಂದರು. ಮಾದರಿ ಯುವಕ ಸಂಘದ ಅಧ್ಯಕ್ಷ ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ ಎನ್.ಎಸ್. ಜಯಣ್ಣ, ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ರಮೇಶ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್. ರಘು, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್, ಮುಖಂಡರಾದ ನಾಗೇಶ್, ಸಂಘದ ಕಾರ್ಯದರ್ಶಿ ತನುಕುಮಾರ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.