ಕೂಡಿಗೆ, ಡಿ. 2: ಉತ್ತರ ಕೊಡಗಿನ ಅರೆಮಲೆನಾಡು ಪ್ರದೇಶವಾದ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮದ ಶಕ್ತಿ ದೇವತೆ ಶ್ರೀ ಬನಶಂಕರಿ ಹಬ್ಬದ ಅಂಗವಾಗಿ ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆಯಿಂದಲೇ ಗಣಪತಿ ಪೂಜೆ, ಪುಣಾಹಃ ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಮೃತ್ಯುಂಜಯ ಹೋಮ, ನವಗ್ರಹ ಪೂಜೆ ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಜರುಗಿದವು.

ಮಧ್ಯಾಹ್ನ ಶ್ರೀ ಅಮ್ಮನವರಿಗೆ ಕ್ಷೀರಾಭಿಷೇಕ ಮಹಾಪೂಜೆ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಂಜೆ ಕ್ಷೀರಾಭಿಷೇಕ, ಗಣಪತಿ ಪೂಜೆ ನಂತರ ಶ್ರೀ ಬನಶಂಕರಿ ದೇವಿಯನ್ನು ವಿವಿಧ ಪುಷ್ಪಗಳಿಂದ ಹಾಗೂ ಆಭರಣಗಳಿಂದ ಅಲಂಕರಿಸ ಲಾಯಿತು.

ಗ್ರಾಮದಲ್ಲಿ ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿ ಬನಶಂಕರಿ ದೇವಸ್ಥಾನದಲ್ಲಿ ಬೆಳಿಗ್ಗೆ ಕಲಶ ಹಾಗೂ ರಾತ್ರಿ ಅಗ್ನಿಕುಂಡ ಸ್ಥಾಪಿಸುವದು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಎನ್. ಬಸವರಾಜು ಮತ್ತು ಕಾರ್ಯದರ್ಶಿ ಹೆಚ್.ಪಿ. ರಾಜು ಹಾಗೂ ಸಮಿತಿ ಸದಸ್ಯರ ನೇತೃತ್ವದಲ್ಲಿ ನಡೆದವು. ಹಬ್ಬದ ಅಂಗವಾಗಿ ಗ್ರಾಮವನ್ನು ಕೇಸರಿ ಬಂಟಿಗ್ಸ್, ಹಸಿರು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಇಡೀ ಗ್ರಾಮವೇ ಹಬ್ಬದ ಅಂಗವಾಗಿ ಶೃಂಗಾರಗೊಂಡಿತ್ತು.

ರಾತ್ರಿ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಸಮಿತಿ, ಶ್ರೀಬಸವೇಶ್ವರ ಸಮಿತಿ, ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಂತರ ವಾದ್ಯಗೋಷ್ಠಿಗಳೊಂದಿಗೆ ದೇವಿಯ ಉತ್ಸವವನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು.

ಹರಕೆ ಹೊತ್ತ ಭಕ್ತಾದಿಗಳು 9 ದಿವಸ ಉಪವಾಸ ವ್ರತ ಆಚರಿಸಿ ಉತ್ಸವಗಳೊಂದಿಗೆ ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಬಂದು ದೇವಸ್ಥಾನದ ಮುಂದೆ ಹಾಕಿರುವ ಅಗ್ನಿಕುಂಡವನ್ನು ಹಾಯ್ದು ದೇವಿಯ ದರ್ಶನ ಪಡೆದು ಪುನೀತರಾದರು. ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೆ ಭಾಗಗಳಿಂದ ಹೊರಟ ಏಳು ಉತ್ಸವ ಮಂಟಪಗಳ ಶೋಭಾಯಾತ್ರೆಯು ನವರಾತ್ರಿಯ ಉತ್ಸವ ದಸರಾ ಮಾದರಿಯಲ್ಲಿ ಶೋಭಾಯಾತ್ರೆಯ ಮಂಟಪಗಳು ಮೂರು ಮತ್ತು ನಾಲ್ಕು ಟ್ಯಾಕ್ಟರ್‍ಗಳಿಂದ ಅಳವಡಿಸಲ್ಪಟ್ಟಿದ್ದವು. ಅಲ್ಲದೇ ಭಾರೀ ಶಬ್ಧ ಮಾಡುವ ಧ್ವನಿವರ್ಧಕವನ್ನು ಅಳವಡಿಸಿ ಶೋಭಾಯಾತ್ರೆ ವಿಗ್ರಹಗಳ ಚಲನವಲನ ನೋಡುಗರಿಗೆ ಹೆಚ್ಚು ಆಶ್ಚರ್ಯ ಚಕಿತವಾಗಿತ್ತು. ಅಲ್ಲದೇ ಹಬ್ಬಕ್ಕೆ ಅದ್ದೂರಿ ಮೆರಗು ನೀಡಿದವು.

ಮೆರವಣಿಗೆ ಸಂದರ್ಭ ಗ್ರಾಮದ ಬಸ್ ನಿಲ್ದಾಣದ ಬಳಿ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯಿತು. ಹಬ್ಬದಲ್ಲಿ ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಸಾವಿರಾರೂ ಮಂದಿ ಪಾಲ್ಗೊಂಡಿದ್ದರು. ಹಬ್ಬದ ಸಂದರ್ಭ ಗ್ರಾಮದಲ್ಲಿ ಸೇರಿದ್ದ ಜಾತ್ರೆಯು ಗ್ರಾಮೀಣ ಸಂಸ್ಕøತಿಯನ್ನು ಪ್ರತಿಬಿಂಭಿಸಿತು. ಹಬ್ಬ ಅಂಗವಾಗಿ ಪೊಲೀಸ್ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.