ಮಡಿಕೇರಿ, ಡಿ. 5: ಶ್ರೀ ಸುಬ್ರಹ್ಮಣ್ಯನನ್ನು ಸ್ತುತಿಸುವ ಚಂಪಾ ಷಷ್ಠಿ ಉತ್ಸವವನ್ನು ನಾಡಿನಾದ್ಯಂತ ಭಕ್ತರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬೆಳಿಗ್ಗೆಯಿಂದಲೇ ವ್ರತಾಚರಣೆಯೊಂದಿಗೆ ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಾಗನಕಟ್ಟೆಗೆ ತೆರಳಿ, ಹಾಲೆರೆದು, ಅಭಿಷೇಕ ಮಾಡಿ ಸ್ಕಂದನನ್ನು ಪ್ರಾರ್ಥಿಸಿದರು.

ಓಂಕಾರೇಶ್ವರ ದೇವಾಲಯಇಲ್ಲಿನ ಓಂಕಾರೇಶ್ವರ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ಭಕ್ತಿಪೂರ್ಣ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿ ವಿಶೇಷ ಪೂಜೆಗಳು ನಡೆದವು. ನೂರಾರು ಭಕ್ತರು ಈಶ್ವರನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಮಹಾಪೂಜೆಯ ಬಳಿಕ ಸುಮಾರು ಐದುಸಾವಿರ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.

ಸಂಜೆ ವೇಳೆ ತೆಪ್ಪೋತ್ಸವ ಮತ್ತು ಪಲ್ಲಕ್ಕಿ ಉತ್ಸವಗಳು ನಡೆದು ಭಕ್ತರ ಮನಕ್ಕೆ ಮುದ ನೀಡಿದವು. ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ದೇವಾಲಯಕ್ಕೆ ಭೇಟಿಯಿತ್ತರು. ಕಾರ್ಯನಿರ್ವಹಣಾಧಿಕಾರಿ ಸಂಪತ್‍ಕುಮಾರ್ ಉಸ್ತುವಾರಿಯಲ್ಲಿ ಕಾರ್ಯಕ್ರಮಗಳು ನಡೆದವು. ನಗರದ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಾಲಯದಲ್ಲೂ ಷಷ್ಠಿ ಆಚರಿಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ವತಿಯಿಂದ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ನೆರೆದಿದ್ದ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ದೇವಾಲಯ ಸಮಿತಿಯವರು, ಮಹಿಳೆಯರು ಸ್ವಯಂ ಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಬೈರಂಬಾಡ

ಇತಿಹಾಸ ಪ್ರಸಿದ್ಧ ಬೈರಂಬಾಡದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಹಬ್ಬದ ಉತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ನಡೆಯಿತು.

ಬೆಳಿಗ್ಗೆ ನಾಲ್ಕು ಗಂಟೆಯಿಂದ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟಕೃಷ್ಣ ವೈಲಾಯ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಕ್ಷೀರಾಭಿಷೇಕ,

(ಮೊದಲ ಪುಟದಿಂದ) ರುದ್ರಾಭಿಷೇಕಗಳು ನಡೆದವು. ಬೆಳಿಗ್ಗೆ ನಾಲ್ಕು ಗಂಟೆಯಿಂದ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಹಣ್ಣುಕಾಯಿ, ಹರಕೆಯ ಹಣಗಳನ್ನು ಒಪ್ಪಿಸಿ ಪೂಜೆ ಸಲ್ಲಿಸಿದರು. ಮೂರ್ನಾಡು, ಬಲಮುರಿ, ವೀರಾಜಪೇಟೆ, ಸಿದ್ದಾಪುರ, ಮರಗೋಡು, ಹಾಕತ್ತೂರು ಸುತ್ತಮುತ್ತಲುಗಳ ಗ್ರಾಮಗಳ ಗ್ರಾಮಸ್ಥರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಸುಮಾರು 40 ಸಾವಿರಕ್ಕೂ ಅಧಿಕ ಭಕ್ತಾದಿಗಳು ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆದರು. ಭಕ್ತಾದಿಗಳೊಂದಿಗೆ ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ಅಪಾರ ಸಂಖ್ಯೆಯಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸಿದರು.

ದೇವರಿಗೆ ಮಹಾಮಂಗಳಾರತಿ ಸೇವೆ ನಡೆದ ಬಳಿಕ ಮಧ್ಯಾಹ್ನ ನೆರೆದ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಅನ್ನಸಂರ್ತಪಣೆ ನಡೆಯಿತು. ದೇವಾಲಯದ ಹೊರಭಾಗದಲ್ಲಿ ಹರಕೆ ಹೊತ್ತ ಭಕ್ತಾದಿಗಳು ಕೇಶ ಮುಂಡನ ನೆರವೇರಿಸಿದರು. ಹರಕೆ ಹೊತ್ತ ಭಕ್ತರು ನಾಗರೂಪ, ಆಳುರೂಪಗಳನ್ನು ಒಪ್ಪಿಸಿ ಹರಕೆಗಳನ್ನು ತೀರಿಸಿಕೊಂಡರು. ಪ್ರತಿವರ್ಷದಂತೆ ಈ ಬಾರಿಯೂ ಕೂಡ ಒಂದು ದಿನದ ಮುಂಚಿತವಾಗಿ ಬಂದು ಸೇರುವ ಭಿಕ್ಷುಕರು ಕಾಫಿ ತೋಟದ ನಡುವಿನ ದೇವಾಲಯಕ್ಕೆ ತೆರಳುವ ದಾರಿಯಲ್ಲಿ ಕುಳಿತು ಭಿಕ್ಷಾಟನೆಯಲ್ಲಿ ತೊಡಗಿದ್ದರು. ಭಿಕ್ಷುಕರಿಗೆ ಭಕ್ತರು ಅಕ್ಕಿ ಹಾಗೂ ಹಣವನ್ನು ನೀಡಿ ಮುಂದೆ ಸಾಗುವ ದೃಶ್ಯ ಕಂಡು ಬಂತು.

ಬೆಳಗ್ಗೆಯಿಂದ ಸಂಜೆಯವರೆಗೆ ಮೂರ್ನಾಡು, ಸಿದ್ದಾಪುರ, ವೀರಾಜಪೇಟೆಗಳಿಂದ ಜಾತ್ರಾ ವಿಶೇಷವಾಗಿ ಖಾಸಗಿ ಬಸ್‍ಗಳ ಓಡಾಟದಿಂದ ಭಕ್ತಾಧಿüಗಳಿಗೆ ದೇವಾಲಯಕ್ಕೆ ತೆರಳಲು ಅನುಕೂಲಕರವಾಯಿತು. ವೃತ್ತ ನಿರೀಕ್ಷಕ ಮೇದಪ್ಪ ಅವರ ನೇತೃತ್ವದಲ್ಲಿ ವಾಹನಗಳ ನಿಲುಗಡೆಗೆ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಸೂಕ್ತ ರೀತಿಯಲ್ಲಿ ಸಂಚಾರಿ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ಬೆಳ್ಯಪ್ಪ ಅವರ ನೇತೃತ್ವದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಸೂಕ್ತವಾದ ವ್ಯವಸ್ಥೆಗಳನ್ನು ಮಾಡಲಾಯಿತು. ಈ ಸಂದರ್ಭ ಮುಕ್ಕಾಟಿರ ಮುತ್ತಣ್ಣ, ಮುಕ್ಕಾಟಿರ ಮುದ್ದಯ್ಯ, ಮುಕ್ಕಾಟಿರ ಕರುಂಬಯ್ಯ, ಮುಕ್ಕಾಟಿರ ನಂಜಪ್ಪ, ಮುಕ್ಕಾಟಿರ ಪೆಮ್ಮಯ್ಯ, ಮೇಕೇರಿರ ಸುಬ್ರಮಣಿ, ಮೇಕೇರಿರ ಪೊನ್ನಪ್ಪ ಹಾಗೂ ಇನ್ನಿತರರು ಹಾಜರಿದ್ದರು.

ಮೂರ್ನಾಡು

ಇಲ್ಲಿನ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು.

ದೇವಾಲಯದ ಅರ್ಚಕ ವೆಂಕಟರಮಣ ಕುಣ್ಣಿಕುಳ್ಳಾಯ ಅವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹೋಮ, ಪಂಚಮೃತ ಅಭಿಷೇಕ, ಕ್ಷೀರ ಅಭಿಷೇಕ, ರುದ್ರ ಅಭಿಷೇಕ, ನವಗ್ರಹ ಪೂಜೆ, ಕುಂಕುಮಾರ್ಚನೆ, ನಡೆ ಪ್ರಾರ್ಥನೆ, ಸುಧಾಪಯ ಸೇವೆಗಳು ನಡೆದವು. ಬಳಿಕ ಮಹಾಮಂಗಳಾರತಿ ನಡೆದು ನೆರೆದಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ನೆರೆದ ಭಕ್ತಾದಿಗಳಿಗೆ ಅನ್ನಸಂರ್ತಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪಾಲಂದಿರ ಪಿ. ಮಾಚಯ್ಯ, ಉಪಾಧ್ಯಕ್ಷ ದಂಬೆಕೋಡಿ ಕೆ. ಸುಬ್ರಮಣಿ, ಕಾರ್ಯದರ್ಶಿ ತಿರ್ಕಚೇರಿರ ಯು. ತಮ್ಮಯ್ಯ ಸದಸ್ಯರು ಹಾಜರಿದ್ದರು.

ಗೋಣಿಕೊಪ್ಪಲು

ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸುಬ್ರಮಣ್ಯ ಷಷ್ಠಿ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪೂಜಾ ಸಾಮಗ್ರಿಗಳನ್ನು ಹೊತ್ತ ಮಹಿಳೆಯರು ದೇವಸ್ಥಾನದ ಬಳಿ ಸಾಲಿನಲ್ಲಿ ಸಾಗಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು.

ಮುಂಜಾನೆ 7.30ರಿಂದ ಆರಂಭಗೊಂಡ ಪೂಜೆ ಮಧ್ಯಾಹ್ನ 3 ಗಂಟೆವರೆಗೆ ಸಾಗಿತು.ಪಟ್ಟಣದ ಸುತ್ತಮುತ್ತಲಿನ ಜನತೆ ಸಾಲಾಗಿ ಬಂದು ತಮ್ಮ ಭಕ್ತಿ ಮೆರೆದರು. ಹಣ್ಣು ಕಾಯಿ ಒಡೆದು ಗಂಧದಕಡ್ಡಿ, ಕಪೂರ ಹಚ್ಚಿ ದೇವರಿಗೆ ನಮಿಸಿದರು. ಹರಕೆ ಹೊತ್ತವರು ತುಲಾಭಾರ ನೆರವೇರಿಸಿದರು.

ಉತ್ಸವದಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಾಗಿ ಪಾಲ್ಗೊಂಡಿದ್ದರು. ಪುರುಷ ಭಕ್ತರ ಸಂಖ್ಯೆ ಕಡಿಮೆ ಇತ್ತು. ದೇವಸ್ಥಾನ ಎದುರು ಇರುವ ಅರಳಿ ಮತ್ತು ಬೇವಿನ ಕಟ್ಟೆಯ ನಾಗ ಬನಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕಿ ತೆಂಗಿನ ಕಾಯಿ ಒಡೆದು ಪೂಜಿಸಿದರು.

ದೇವಸ್ಥಾನ ಹೊರಗೆ ನಿರ್ಮಿಸಿದ್ದ ಮಕ್ಕಳ ವಿವಿಧ ಆಟಿಕೆ ವಸ್ತು ಮತ್ತು ತಿಂಡಿ-ತಿನಿಸುಗಳ ಅಂಗಡಿಗಳಲ್ಲಿ ಜನತೆ ಖುಷಿಯಿಂದ ವಸ್ತುಗಳನ್ನು ಖರೀದಿಸಿದರು. ಹಾತೂರು ಸಮೀಪದ ಬೈರಾಮುಂಡದಲ್ಲಿಯೂ ಉತ್ಸವ ಯಶಸ್ವಿಯಾಗಿ ಜರುಗಿತು. ಪೊನ್ನಂಪೇಟೆ ಸಮೀಪದ ಹರಿಹರದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯ ನೆರವೇರಿಸಿದರು.

ನಾಪೆÉÇೀಕ್ಲು

ಸಮೀಪದ ನೆಲಜಿ ಗ್ರಾಮದ ಶ್ರೀ ಭಗವತಿ ದೇವಳದಲ್ಲಿ ಷಷ್ಠಿ ಪ್ರಯುಕ್ತ ಆಶ್ಲೇಷ ಬಲಿ ಪೂಜೆ ನಡೆಯಿತು ಈ ಸಂದರ್ಭ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸುಂಟಿಕೊಪ್ಪ

ಇಲ್ಲಿನ ಮಧುರಮ್ಮ ಬಡಾವಣೆಯಲ್ಲಿ ಎ.ಎಂ. ರಘು ಅವರ ಜಾಗದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠ್ಠಿ ಹಬ್ಬದ ಪ್ರಯುಕ್ತ ನಾಗದೇವರ 26ನೇ ವಾರ್ಷಿಕೋತ್ಸವವು ಸಂಭ್ರಮ ಸಡಗರದಿಂದ ನಡೆಯಿತು.

ಅರಳಿಮರ ಬುಡದಲ್ಲಿ ಉದ್ಭವವಾಗಿದ್ದ ನಾಗದೇವರ ವಿಗ್ರಹ ಪೂಜೆಯನ್ನು ಕಳೆದ 26 ವರ್ಷಗಳಿಂದ ಎ.ಎಂ.ರಘು ಹಾಗೂ ಅವರ ಪತ್ನಿರಾಣಿ ಎಂಬವರು ಆಚರಿಸಿಕೊಂಡು ಬರುತ್ತಿದ್ದಾರೆ.

ಸೋಮವಾರಪೇಟೆ: ತರಕಾರಿಗಳ ಹಂಚುವಿಕೆ ಹಾಗೂ ಸುಬ್ರಹ್ಮಣ್ಯನನ್ನು ವಿಶೇಷವಾಗಿ ಪೂಜಿಸುವ ಹಬ್ಬವಾದ ಷಷ್ಠಿ ಹಬ್ಬವನ್ನು ನಾಡಿನ ಜನತೆ ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಿದರು.

ವಿವಿಧ ತರಕಾರಿಗಳನ್ನು ಮನೆ ಮನೆಗಳಲ್ಲಿ ಪರಸ್ಪರ ಹಂಚಿಕೊಳ್ಳುವ ಮೂಲಕ ಸುಬ್ರಹ್ಮಣ್ಯ ಷಷ್ಠಿ ಹಬ್ಬವು ಗ್ರಾಮೀಣ ಸೊಗಡಿನ ಪ್ರತೀಕವೂ ಆಗಿದೆ. ಬೆಳಗ್ಗಿನ ಜಾವ ಪ್ರತಿ ಮನೆಗಳಿಂದಲೂ ತಟ್ಟೆಗಳಲ್ಲಿ ತರಕಾರಿಗಳನ್ನಿಟ್ಟು, ನೆರೆಮನೆಯವರಿಗೆ ಮನೆ ಮಂದಿ ಹಂಚುವ ಕಾರ್ಯ ಬಹುತೇಕ ಕಡೆಗಳಲ್ಲಿ ಕಾಣಬಂತು. ಅದರಂತೆ ಸಂಗ್ರಹವಾಗುವ ತರಕಾರಿಗಳನ್ನು ಸೇರಿಸಿ ಸಾಂಬಾರ್ (ಕೂಟು) ಮಾಡಿ ಬಂಧು-ಬಳಗದವರಿಗೆ ಉಣ ಬಡಿಸುವ ಕಾರ್ಯಗಳು ನಡೆಯಿತು.

ಇನ್ನು ವಿಶೇಷವಾಗಿ ಸುಬ್ರಹ್ಮಣ್ಯನನ್ನು ನಾಗ ದೈವಗಳ ಮೂಲಕವೂ ಪೂಜಿಸುವದು ವಾಡಿಕೆಯಾಗಿದ್ದು, ಪಟ್ಟಣದ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪಿತ ನಾಗಮೂರ್ತಿಗಳಿಗೆ ವಿವಿಧ ಅಭಿಷೇಕ ಹಾಗೂ ಅರ್ಚನೆ ಪೂಜೆಗಳು ನಡೆದವು. ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿನ ನಾಗಮೂರ್ತಿಗಳಿಗೆ ವಿಶೇಷ ಪೂಜೆಗಳು ನಡೆದವು. ಭಕ್ತಾದಿಗಳು ಪೂಜೆಗಳ ಸೇವಾರ್ಥ ಮಾಡಿಸುವ ಮೂಲಕ ಷಷ್ಠಿ ಹಬ್ಬವನ್ನು ಆಚರಿಸಿದರು.