ಸುಂಟಿಕೊಪ್ಪ, ಡಿ. 29: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 46ನೇ ವಾರ್ಷಿಕ ಮಂಡಲ ಪೂಜೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಸೋಮವಾರ ಬೆಳಗ್ಗಿನಿಂದಲೇ ದೇವಸ್ಥಾನದ ಮುಖ್ಯ ಅರ್ಚಕ ಗಣೇಶ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪ್ರಸನ್ನ ಭಟ್, ರಾಧಾಕೃಷ್ಣ ಭಟ್, ಶ್ರೀನಿವಾಸ್ ಭಟ್, ಮಹಬಲ ಭಟ್, ದರ್ಶನ್ ಭಟ್ ಗಣಪತಿ ಹೋಮ, ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ, ದೇವರಿಗೆ ಮಧ್ಯಾಹ್ನದ ಪೂಜೆ, ಲಕ್ಷಾರ್ಚನೆ, ಪಲ್ಲಪೂಜೆ ನಡೆಸಿದರು.
ಕೇರಳದ ಚೆಂಡೆವಾದ್ಯ ಮತ್ತು ಗಂಭೀರ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಮಧ್ಯಾಹ್ನ ಅಯ್ಯಪ್ಪ ವ್ರತಧಾರಿಗಳು ಸೇರಿದಂತೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಹಾ ಪೂಜೆ, ಮಹಾಮಂಗಳಾರತಿ ನಡೆಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.