ಮಡಿಕೇರಿ ಜ.2 :ನಗರದಲ್ಲಿ ಶೌಚಾಲಯಗಳ ಕೊರತೆ ಎದುರಾಗಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಗರಸಭೆಯ ನಿರ್ಲಕ್ಷ್ಯವೇ ಕಾರಣವೆಂದು ಜಾತ್ಯಾತೀತ ಜನತಾ ದಳದ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಹೆಚ್.ಎನ್.ಯೋಗೇಶ್ ಕುಮಾರ್ ಆರೋಪಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಮಡಿಕೇರಿ ನಗರಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಸೂಕ್ತ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಕಾರ್ಯವನ್ನು ನಗರಸಭೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸುವದು ನಗರಸಭೆಯ ಕರ್ತವ್ಯವಾಗಿದೆ. ಆದರೆ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಹಾಗೂ ನಗರ ಪೊಲೀಸ್ ಠಾಣೆಯಿಂದ ಫೀ.ಮಾ.ಕಾರ್ಯಪ್ಪ ಕಾಲೇಜಿನ ವರೆಗೆ ಯಾವದೇ ಸಾರ್ವಜನಿಕ ಶೌಚಾಲಯಗಳಿಲ್ಲ. ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಇದರಿಂದ ಯಾವದೇ ಪ್ರಯೋಜನವಿಲ್ಲ. ವಾರದ ಕೊನೆ ದಿನಗಳಲ್ಲಿ ಹಾಗೂ ಸಾಲು ಸಾಲು ರಜೆಯ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಿದ್ದು, ಲಾಡ್ಜ್‍ಗಳು ಅಥವಾ ಹೋಂಸ್ಟೇಗಳು ಸಿಗದೆ ತಮ್ಮ ವಾಹನಗಳಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಪ್ರವಾಸಿಗರು ಶೌಚಾಲಯದ ಕೊರತೆಯನ್ನು ಎದುರಿಸಬೇಕಾಗಿದೆ. ಊಟ, ಉಪಹಾರಕ್ಕೆಂದು ಹೊಟೇಲ್‍ಗಳಿಗೆ ತೆರಳುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಇಲ್ಲಿ ಕೂಡ ಶೌಚಾಲಯದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ನಿಯಮಾನುಸಾರ ಹೊಟೇಲ್‍ಗಳಲ್ಲಿ ಶೌಚಾಲಯವಿರುವದು ಕಡ್ಡಾಯವಾದರೂ ನಗರಸಭೆಯ ನಿರ್ಲಕ್ಷ್ಯದಿಂದಾಗಿ ನಿಯಮ ಉಲ್ಲಂಘನೆಯಾಗುತ್ತಿದೆÉ.

ಕೆಲವು ಹೋಟೆಲ್‍ಗಳಲ್ಲಿ ಶೌಚಾಲಯವಿದೆಯಾದರೂ ಶುಚಿತ್ವದ ಕೊರತೆ ಎದುರಾಗಿದೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ಕೇಂದ್ರ ಸರಕಾರ ದೇಶದೆಲ್ಲೆಡೆ ಜನಜಾಗೃತಿ ಮೂಡಿಸುತ್ತಿದ್ದರೂ ಮಡಿಕೇರಿ ನಗರಸಭೆ ಮಾತ್ರ ಜಾಗೃತಗೊಳ್ಳುತ್ತಿಲ್ಲ. ನಗರಸಭೆಯ ಬಳಿ ಸಾಕಷ್ಟು ಅನುದಾನ ಹಾಗೂ ಜಾಗ ಲಭ್ಯವಿದ್ದರೂ ಇದನ್ನು ಸದುಪಯೋಗ ಪಡಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಆಡಳಿತ ವ್ಯವಸ್ಥೆ ಮಾಡುತ್ತಿಲ್ಲ. ಈ ಹಿಂದೆ ಕಾಲೇಜು ರಸ್ತೆಯ ಸಹಕಾರಿ ಬ್ಯಾಂಕ್ ಬಳಿಯೊಂದು ಸಾರ್ವಜನಿಕ ಶೌಚಾಲಯವಿತ್ತಾದರೂ ಇಂದು ಅದು ನಾಪತ್ತೆಯಾಗಿದೆ. ಶೌಚಾಲಯ ಮಾತ್ರವಲ್ಲದೆ ನಗರಸಭೆಗೆ ಸೇರಿದ ಜಾಗ ಕೂಡ ಕಣ್ಮರೆಯಾಗಿದ್ದು, ಆಡಳಿತ ವ್ಯವಸ್ಥೆ ಈ ಬಗ್ಗೆ ಯಾವದೇ ಕ್ರಮ ಕೈಗೊಂಡಿಲ್ಲವೆಂದು ಯೋಗೇಶ್ ಕುಮಾರ್ ಆರೋಪಿಸಿದ್ದಾರೆ.

ಕಾವೇರಿ ಹಾಲ್ ಎದುರು ಭಾಗದಲ್ಲಿ ಸಾರ್ವಜನಿಕ ಶೌಚಾಲಯವೊಂದು ಕಳೆದ ಅನೇಕ ತಿಂಗಳುಗಳಿಂದ ನಿರ್ಮಾಣ ಹಂತದಲ್ಲಿದೆಯಾದರೂ ಈ ಕಟ್ಟಡಕ್ಕೆ ಅನುದಾನದ ಕೊರತೆ ಇದೆ ಎಂದು ಮತ್ತು 3.50 ಲಕ್ಷ ರೂ. ಬೇಕೆಂದು ಕಾರಣ ನೀಡಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

ನಗರದ ಬೆಳವಣಿಗೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯ ಕುರಿತು ಮಾತನಾಡುವ ಜಿಲ್ಲಾಡಳಿತ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲೇ ಅಗತ್ಯವಿರುವಷ್ಟು ಸಾರ್ವಜನಿಕ ಶೌಚಾಲಯಗಳಿಲ್ಲದೆ ಇರುವ ಬಗ್ಗೆ ಯಾವದೇ ಕಾಳಜಿ ತೋರದೆ ಇರುವದು ವಿಪರ್ಯಾಸವಾಗಿದೆ. ಬಯಲು ಶೌಚ ಮುಕ್ತ ಗ್ರಾಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಶೌಚಾಲಯಗಳ ಕೊರತೆಯಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಬಯಲು ಶೌಚವನ್ನೇ ಅವಲಂಬಿಸಬೇಕಾದ ದುಸ್ಥಿತಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಸೃಷ್ಟಿಯಾಗಿರುವದು ದುರಂತವಾಗಿದೆ.

ನಗರಸಭೆ ತಕ್ಷಣ ನಗರದಲ್ಲಿ ಹೈಟೆಕ್ ಸುಲಭ್ ಶೌಚಾಲಯಗಳನ್ನು ನಿರ್ಮಿಸಿ ಶುಚಿತ್ವಕ್ಕೆ ಆದ್ಯತೆ ನೀಡದಿದ್ದರೆ ನಗರಸಭೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.