ಮಡಿಕೇರಿ, ಜೂ. 20: ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ‘ಅರಿವು’ ಯೋಜನೆಯಡಿ ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿದರರಿಗೂ ಶೈಕ್ಷಣಿಕ ಸಾಲ ಸೌಲಭ್ಯ ಕಲ್ಪಿಸಲು ಸರ್ಕಾರ ತೀರ್ಮಾನಿಸಿದ್ದು, ಅರ್ಹರು ಶೈಕ್ಷಣಿಕ ಸಾಲ ಸೌಲಭ್ಯ ಪಡೆದುಕೊಳ್ಳ ಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಸ್.ವೈ.ಎಂ. ಮಸೂದ್ ಫೌಜ್ದಾರ್ ತಿಳಿಸಿದ್ದಾರೆ.

ನಗರದ ಕಾಲೇಜು ರಸ್ತೆಯ ರಾಮಮಂದಿರ ಬಳಿಗೆ ಸ್ಥಳಾಂತರ ವಾಗಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ನೂತನ ಕಚೇರಿ ಯನ್ನು ಉದ್ಘಾಟಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅರಿವು ಯೋಜನೆಯಡಿ ಈ ಹಿಂದೆ ವೃತ್ತಿಪರ ವ್ಯಾಸಂಗ ಮಾಡುತ್ತಿರುವವರಿಗೆ ಮಾತ್ರ ವಿದ್ಯಾಭ್ಯಾಸಕ್ಕಾಗಿ 50 ಸಾವಿರ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಈ ವರ್ಷದಿಂದ ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿ ಗಳಿಗೂ ಸಾಲ ಸೌಲಭ್ಯ ವಿಸ್ತರಿಸ ಲಾಗಿದೆ ಎಂದು ತಿಳಿಸಿದರು.

ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸ್ವಾವಲಂಬನೆ, ಶ್ರಮಶಕ್ತಿ, ಅರಿವು, ಕಿರುಸಾಲ, ಗಂಗಾ ಕಲ್ಯಾಣ, ಕೃಷಿಭೂಮಿ ಯೋಜನೆ, ಗೃಹ ಸಾಲ ಯೋಜನೆ ಮೇಲೆ ಬಡ್ಡಿ ಸಹಾಯಧನ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಮೂಲಕ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಸುಮಾರು ರೂ. 241 ಕೋಟಿ ಸಾಲ ಸೌಲಭ್ಯವನ್ನು ವಿತರಿಸಿ ಸುಮಾರು 91 ಸಾವಿರ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಶೇ. 50 ಕ್ಕೂ ಹೆಚ್ಚು ಸಾಲ ಮರುಪಾವತಿಯಾಗಿದೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹೇಳಿದರು.

ಸ್ವಾವಲಂಬನ ಯೋಜನೆಯಡಿ ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್‍ಗಳು ಹಣಕಾಸು ಸಂಸ್ಥೆಗಳ ಸಹಯೋಗ ದೊಂದಿಗೆ ಗರಿಷ್ಠ 5 ಲಕ್ಷದವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಶ್ರಮಶಕ್ತಿ ಯೋಜನೆಯಡಿ ಗ್ರಾಮೀಣ ಕುಶಲಕರ್ಮಿಗಳು ಹಾಗೂ ವೃತ್ತಿ ಕುಶಲ ಕಸುಬುದಾರರಿಗೆ ಕುಶಲತೆ ಮತ್ತು ತಂತ್ರಜ್ಞಾನ ಉತ್ತಮಪಡಿಸಿ ಕೊಳ್ಳಲು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 25 ಸಾವಿರ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 2014-15ನೇ ಸಾಲಿನಲ್ಲಿ ಒಟ್ಟು 964 ಫಲಾನುಭವಿ ಗಳಿಗೆ ರೂ 312.7 ಲಕ್ಷ ಗುರಿ ನಿಗದಿಪಡಿಸಲಾಗಿತ್ತು, ಮಾರ್ಚ್ 2015 ಮಾಹೆಯವರೆಗೆ ಒಟ್ಟು 605 ಫಲಾನುಭವಿಗಳಿಗೆ ರೂ. 183.39 ಲಕ್ಷಗಳ ಸಾಲವನ್ನು ವಿತರಣೆ ಮಾಡಿ ಶೇ. 59 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

2015-16 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1009 ಫಲಾನುಭವಿ ಗಳಿಗೆ ರೂ. 234.62 ಲಕ್ಷ ಗುರಿ ನಿಗದಿಪಡಿಸಲಾಗಿತ್ತು, ಈ ಮಾಹೆವರೆಗೂ ಒಟ್ಟು 445 ಫಲಾನುಭವಿಗಳಿಗೆ ರೂ. 117.84 ಲಕ್ಷಗಳ ಸಾಲವನ್ನು ವಿತರಣೆ ಮಾಡಲಾಗಿದ್ದು ಶೇ. 51 ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸ ಲಾಗಿದೆ.

2015-16 ನೇ ಸಾಲಿನಲ್ಲಿ ಒಟ್ಟು ರೂ. 7,64,900 ಸಾಲ ಮರುಪಾವತಿ ಯಾಗಿದೆ. ವಿವಿಧ ಯೋಜನೆಯಡಿ ಸಾಲ ಬಾಕಿ ಉಳಿಸಿಕೊಂಡಿದ್ದ 2332 ಫಲಾನುಭವಿಗಳಿಗೆ ರೂ. 2,81,70,293 ನ್ನು ಸಾಲ ಮನ್ನಾ ಮಾಡಲಾಗಿದೆ ಎಂದು ಡಾ. ಎಸ್.ವೈ.ಎಂ. ಮಸೂದ್ ಫೌಜ್ದಾರ್ ತಿಳಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಕರ್ನಾಟಕ ರಾಜ್ಯ ಮದ್ಯಪಾನ ಮಂಡಳಿ ನಿರ್ದೇಶಕ ಯಾಕುಬ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ಪ್ರಸಾದ್ ಮತ್ತಿತರರು ಇದ್ದರು.