ಮಡಿಕೇರಿ, ಜ. 13: ಚಿಕ್ಕಮಗಳೂರಿನ ಶೃಂಗೇರಿಯ ಜಗದ್ಗುರು ಚಂದ್ರಶೇಖರ ಮೆಮೋರಿಯಲ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಅಭಿಷೇಕ್ ಅವರ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿರುವ ಕೊಡಗು ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕಾಲೇಜಿನಲ್ಲಿ ಜನವರಿ 7 ರಂದು ಕಾಲೇಜು ಎನ್.ಎಸ್.ಎಸ್. ಘಟಕ ಹಾಗೂ ಎ.ಬಿ.ವಿ.ಪಿ. ವತಿಯಿಂದ ಹುತಾತ್ಮ ಯೋಧರ ಕುರಿತಾದ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎ.ಬಿ.ವಿ.ಪಿ. ಕಾರ್ಯಕರ್ತ ಅಭಿಷೇಕ್ ಮೇಲೆ ಕಾರ್ಯಕ್ರಮ ನಡೆಯದಂತೆ ಒತ್ತಡವನ್ನು ಎನ್.ಎಸ್.ಯು.ಐ. ಕಾರ್ಯಕರ್ತರು ಹಾಕಿದ್ದರು. ಆದರೆ, ಯಾವದೇ ಒತ್ತಡಕ್ಕೆ ಮಣಿಯದೆ ಅಭಿಷೇಕ್ ಮತ್ತು ಎ.ಬಿ.ವಿ.ಪಿ. ಕಾರ್ಯಕರ್ತರು ಕಾರ್ಯಕ್ರಮ ನಡೆಸಲು ಮುಂದಾದಾಗ ಎನ್.ಎಸ್.ಯು.ಐ. ಕಾರ್ಯಕರ್ತರು ಕಾರ್ಯಕ್ರಮ ನಡೆಯದಂತೆ ಮಾಡಿದರು. ಈ ಕಾರ್ಯಕ್ರಮ ವಿರೋಧಿಸಿದ ಎನ್.ಎಸ್.ಯು.ಐ. ವಿದ್ಯಾರ್ಥಿ ಸಂಘಟನೆ ದೇಶದ ಹುತಾತ್ಮ ಯೋಧರನ್ನು ಅವಮಾನಗೊಳಿಸಿ ವಿದ್ಯಾರ್ಥಿ ಪರಿಷತ್‍ನ ಕಾರ್ಯಕರ್ತರ ಮೇಲೆ ಹಲ್ಲೆಯನ್ನು ನಡೆಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಪ್ರಭಾವದ ಮೂಲಕ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಎ.ಬಿ.ವಿ.ಪಿ. ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ, ಎ.ಬಿ.ವಿ.ಪಿ. ಕಾರ್ಯಕರ್ತ ಅಭಿಷೇಕ್‍ನನ್ನು ಗುರಿಯಾಗಿಸಿಕೊಂಡು ಅವನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಯನ್ನು ಮಾಡಿದ್ದಾರೆ. ಅಲ್ಲದೇ ಕ್ಯಾಂಪಸ್ ತುಂಬಾ ಕಾರ್ಯಕ್ರಮ ರದ್ದತಿ ಕುರಿತು ಅಪಹಾಸ್ಯವನ್ನು ಮಾಡಿದ್ದಾರೆ. ಈ ಘಟನೆಯಿಂದ ಮತ್ತು ಪೊಲೀಸರ ಬೆದರಿಕೆಯಿಂದ ಅಭಿಷೇಕ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ ಎ.ಬಿ.ವಿ.ಪಿ. ಸರಕಾರ ದೇಶ ಭಕ್ತರ ಕಾರ್ಯಕ್ರಮಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ಭಾಗ್ಯವನ್ನು ನೀಡುತ್ತಿದೆ. ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭ ಎ.ಬಿ.ವಿ.ಪಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದರಾಜು, ನಗರ ಸಂಚಾಲಕ ಗುಣಶೇಖರ್ ಹಾಗೂ ಇನ್ನಿತರರು ಇದ್ದರು.