ಕೂಡಿಗೆ, ಜು. 16: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ರೈತರು ಬೆಳೆದ ಶುಂಠಿ ಬೆಳೆಗೆ ಮಹಾಕಾಳಿ ರೋಗದ ಬಾಧೆಯಿಂದಾಗಿ ಶುಂಠಿ ಬೆಳೆ ಒಣಗುತ್ತಿದ್ದು, ರೈತರು ಆತಂಕಗೊಂಡಿದ್ದಾರೆ.

ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಶಿರಂಗಾಲ, ತೊರೆನೂರು, ಅಳುವಾರ, ಹೆಬ್ಬಾಲೆ, ಕೂಡಿಗೆ, ಸೀಗೆಹೊಸೂರು ವ್ಯಾಪ್ತಿಗಳಲ್ಲಿ ಈ ಸಾಲಿನಲ್ಲಿ ಹೆಚ್ಚು ಶುಂಠಿ ಬೆಳೆಯನ್ನು ಬೆಳೆದು ತಮ್ಮ ಆರ್ಥಿಕ ಮಟ್ಟವನ್ನು ರೈತರು ಸುಧಾರಿಸಿಕೊಳ್ಳಲು ಶುಂಠಿ ಬೆಳೆದಿದ್ದಾರೆ. ಬೆಳೆ ಒಂದೆರಡು ತಿಂಗಳ ಒಳಗೆ ಉತ್ತಮವಾಗಿ ಬಂದರು, ಇದೀಗ ಗೆಡ್ಡೆ ಕಟ್ಟುವ ಸಂದರ್ಭದಲ್ಲಿ ಮಹಾಕಾಳಿ, ಕರಿಕಡ್ಡಿ ರೋಗ ತಗಲಿರುವದರಿಂದ ಈ ವ್ಯಾಪ್ತಿಯ ರೈತರು ಬೆಳೆದಿರುವ ಬೆಳೆಯು ಕುಂಠಿತಗೊಂಡು ಒಣಗುವದರ ಜೊತೆಯಲ್ಲಿ ಜಮೀನಿನಾದ್ಯಂತ ರೋಗ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಗೆಡ್ಡೆ ದಪ್ಪ ಕಟ್ಟದಿದ್ದರೂ ಕೀಳುವಂತ ಪ್ರಸಂಗ ನಡೆಯುತ್ತಿದೆ.

ತಿಂಗಳ ಹಿಂದೆ 60 ಕೆ.ಜಿ. ಚೀಲಕ್ಕೆ ಸುಮಾರು ರೂ. 2000 ಇತ್ತು. ಇದೀಗ ಕಡಿಮೆಯಾಗುತ್ತ ಕೇವಲ ರೂ. 1000 ರಿಂದ 1200 ಇಳಿಕೆಯಾಗುತ್ತ ಬರುತ್ತಿದೆ. ಇದರಿಂದ ಶುಂಠಿ ಬೆಳೆಗೆ ಅಧಿಕ ಗೊಬ್ಬರ, ನೀರು, ಔಷಧಿಗಳಿಗೆ ಖರ್ಚು ಮಾಡಿದ ಹಣ ಸಿಗದೆ ರೈತರು ನಷ್ಟ ಅನುಭವಿಸುವಂತಾಗಿದೆ.

ಶುಂಠಿ ಬಿತ್ತನೆ ಸಂದರ್ಭ ಹೊರ ಜಿಲ್ಲೆಯಿಂದ ಅಧಿಕ ಬೆಲೆಯಲ್ಲಿ ಖರೀದಿಸಿ ಬಿತ್ತನೆ ಮಾಡಿ, ಲಕ್ಷಗಟ್ಟಲೆ ಹಣ ಖರ್ಚು ಮಾಡಲಾಗಿದ್ದು, ಇದೀಗ ಮಹಾಕಾಳಿ ರೋಗ ಶುಂಠಿಗೆ ಹರಡುತ್ತಿದ್ದು, ಶುಂಠಿಯನ್ನು ಕೀಳಲ್ಪಟ್ಟು, ಸರಿಯಾದ ಬೆಲೆ ಸಿಗದೆ ಖರ್ಚು ಮಾಡಿದ ಅರ್ಧ ಹಣವು ಸಿಗದಂತಾಗುತ್ತದೆ ಎಂದು ರೈತರು ಆತಂಕದಲ್ಲಿದ್ದಾರೆ.

- ಕೆ.ಕೆ. ನಾಗರಾಜ ಶೆಟ್ಟಿ.