ಕೂಡಿಗೆ, ಜು. 26: ಕುಶಾಲನಗರ ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಕೂಡಿಗೆ, ಸೀಗೆಹೊಸೂರು, ಸಿದ್ಧಲಿಂಗಪುರ, ತೊರೆನೂರು, ಹಳೆಗೋಟೆ, ಶಿರಂಗಾಲ ಭಾಗಗಳಲ್ಲಿ ಈ ಸಾಲಿನಲ್ಲಿ ಸ್ವಯಂ ಆಶ್ರಿತ ನೀರಾವರಿಯ ಬೆಳೆಯಾಗಿ ಶುಂಠಿ ಬೆಳೆಯನ್ನು ಬೆಳೆಸಲಾಗಿತ್ತು. ಈ ಬೆಳೆಯು ಈಗಾಗಲೇ ಸಣ್ಣ ಪ್ರಮಾಣದಲ್ಲಿ ಗೆಡ್ಡೆ ಕಟ್ಟಿದ್ದರೂ, ಕಳೆದ ಒಂದು ತಿಂಗಳುಗಳಿಂದ ಈ ಭಾಗದಲ್ಲಿ ಮಹಾಕಾಳಿ, ಕರಿಕಡ್ಡಿ ರೋಗ ಹರಡುವಿಕೆಯಿಂದ ಈಗ ಬೆಳೆದಿರುವ ಶುಂಠಿಯು ತನ್ನ ಗಾತ್ರದ ಪ್ರಮಾಣವು ಕಡಿಮೆಯಾಗಿ ತೂಕದ ಪ್ರಮಾಣವು ಕಡಿಮೆಯಾಗಿ ಬೆಲೆ ಸಿಗದೆ ರೈತರು ನರಳುವಂತಾಗಿದೆ.
ಈಗಾಗಲೇ ಶುಂಠಿ ಬಿತ್ತನೆಗೆ ಸಹಕಾರ ಸಂಘಗಳ ಮೂಲಕ ಸಾಲ ಪಡೆದು ವ್ಯವಸಾಯ ಮಾಡಲಾಗಿದ್ದು, ಅಧಿಕ ಹಣವು ವ್ಯಯವಾಗಿದ್ದು, ಇದೀಗ ರೋಗ ಹರಡಿದ ಶುಂಠಿಯನ್ನು ಹೊರತುಪಡಿಸಿ, ಉಳಿದ ಶುಂಠಿಯನ್ನಾದರೂ ಮಾರಾಟ ಮಾಡಿ ಸಾಲವನ್ನಾದರೂ ತೀರಿಸಲು ಪ್ರಯತ್ನಿಸಿದರೂ ಬೆಲೆಯು ತೀರಾ ಕುಸಿತಗೊಂಡಿದೆ. ಕಳೆದ ತಿಂಗಳು 60 ಕೆ.ಜಿ. ಮೂಟೆಗೆ 1500 ಇದ್ದ ಬೆಲೆ ಇದೀಗ 900 ರೂ.ಗೆ ಇಳಿದಿದ್ದು, ರೈತರಲ್ಲಿ ಆತಂಕ ಉಂಟಾಗಿದೆ. ಅಲ್ಲದೆ, ಶುಂಠಿಯ ಅಂತರರಾಜ್ಯ ಮಾರುಕಟ್ಟೆಯಲ್ಲಿಯೂ ಸಮರ್ಪಕ ಬೆಲೆ ಇಲ್ಲದ ಕಾರಣ ಜಿಲ್ಲೆಯ ಶುಂಠಿ ಬೆಳೆಗೂ ಸರಿಯಾದ ಬೆಲೆಯಿಲ್ಲದೆ, ರೈತರು ನಷ್ಟಕೊಳಗಾಗಿರುವದು ಕಂಡುಬರುತ್ತಿದೆ. ಇದರ ಜೊತೆಯಲ್ಲಿ ವಿವಿಧ ರೋಗಗಳ ಹಾವಳಿಯು ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆಯಿಲ್ಲದೆ ನರಳುವಂತಹ ಪರಿಸ್ಥಿತಿ ಎದುರಾಗಿದೆ.
ತೋಟಗಾರಿಕಾ ಬೆಳೆ ಯಾಗಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಬೆಳೆಯಾಗಿರುವದರಿಂದ ಸರಕಾರ ನಿಗದಿತ ಬೆಲೆಯನ್ನು ಗುರುತು ಪಡಿಸಬೇಕೆಂದು ಹೆಬ್ಬಾಲೆ ಜಿ.ಪಂ. ಸದಸ್ಯ ಹೆಚ್.ಆರ್. ಶ್ರೀನಿವಾಸ್ ಸೇರಿದಂತೆ ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರ ಆಗ್ರಹವಾಗಿದೆ.