ಮಡಿಕೇರಿ, ಆ. 28 : ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ಈಗಾಗಲೇ ಅನೇಕ ಬಾರಿ ಶಂಕುಸ್ಥಾಪನೆ ನೆರವೇರಿಸ ಲಾಗಿದ್ದು, ಸರಣಿ ಶಂಕುಸ್ಥಾಪನೆ ಬದಲಿಗೆ ಶೀಘ್ರ ಕಾಮಾಗಾರಿಯನ್ನು ಆರಂಭಿಸಿ ಎಂದು ಪೀಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆ ಒತ್ತಾಯಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಹರೀಶ್ ಆಚಾರ್ಯ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಿರುವದು ಸ್ವಾಗತಾರ್ಹವೆಂದರು. ಈ ಹಿಂದೆ ಪೀಪಲ್ಸ್ ಮೂವ್‍ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆ ಯೋಜನೆಯ ಅನುಷ್ಠಾನಕ್ಕಾಗಿ ಒತ್ತಾಯಿಸಿತ್ತು. ಅಲ್ಲದೆ ಬಸ್ ನಿಲ್ದಾಣದ ಕಾಮಗಾರಿಯನ್ನು ಖಾಸಗಿಯವರಿಗೆ ನೀಡಿದರೆ ನ್ಯಾಯಾಲಯದ ಮೊರೆ ಹೋಗುವದಾಗಿ ಎಚ್ಚರಿಕೆಯನ್ನು ನೀಡಿತ್ತು. ಇದೀಗ ತಡವಾಗಿ ಯಾದರೂ ಎಚ್ಚೆತ್ತುಕೊಂಡಿರುವ ನಗರಸಭೆ ಉಸ್ತುವಾರಿ ಸಚಿವರ ಮೂಲಕ ಕಾಮಗಾರಿಯನ್ನು ಆರಂಭಿಸಲು ಮುಂದಾಗಿರುವದು ನಗರದ ಜನತೆಗೆ ತೃಪ್ತಿ ತಂದಿದೆ.

ಆದರೆ ಶಂಕುಸ್ಥಾಪನೆಯ ಪ್ರಹಸನಗಳು ಹಿಂದೆಯೂ ಅನೇಕ ಬಾರಿ ನಡೆದಿದ್ದು, ಈ ಬಾರಿಯಾದರೂ ಕಾಮಗಾರಿ ಆರಂಭಗೊಳ್ಳುವ ವಿಶ್ವಾಸ ಜನರಲ್ಲಿದೆ. ಶೀಘ್ರ ಕಾಮಗಾರಿಯನ್ನು ಆರಂಭಿಸಲು ಸಹಕರಿಸಿದ ಸಚಿವರು, ಶಾಸಕರು, ಇತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಶ್ಲಾಘನಾರ್ಹರಾದರೂ ಹೈಟೆಕ್ ಮಾರುಕಟ್ಟೆಯಂತೆ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯೂ ವಿಳಂಬವಾಗಬಾರದು ಎನ್ನುವದು ಸಂಘಟನೆಯ ಅಪೇಕ್ಷೆಯಾಗಿದೆ ಎಂದು ಹರೀಶ್ ಆಚಾರ್ಯ ತಿಳಿಸಿದ್ದಾರೆ. ಪ್ರಯಾಣಿಕರಿಗೆ ಕುಡಿಯುವ ನೀರು, ಸ್ವಚ್ಛ ಮತ್ತು ಸುಸಜ್ಜಿತವಾದ ಶೌಚಾಲಯ, ಅಂಗಡಿ ಮಳಿಗೆಗಳು ಸೇರಿದಂತೆ ಮೂಲಭೂತ ಸೌಲಭ್ಯಗಳು ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವಂತೆ ನೋಡಿಕೊಳ್ಳ ಬೇಕೆಂದು ಅವರು ಒತ್ತಾಯಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡದೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕೆಂದು ಆಗ್ರಹಿಸಿರುವ ಹರೀಶ್ ಆಚಾರ್ಯ ಕಾಮಗಾರಿ ವಿಳಂಬವಾದರೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸ ಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ.