ಕುಶಾಲನಗರ, ಡಿ. 22: ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಹಕಾರಿಯಾಗಲಿದೆ ಎಂದು ಕುಶಾಲನಗರದ ಹಿರಿಯ ನಾಗರಿಕರ ವೇದಿಕೆ ಮಾಜಿ ಅಧ್ಯಕ್ಷ ಸಿ.ಎಲ್. ಕಾಳಪ್ಪ ಹೇಳಿದರು.

ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಆದರ್ಶ ಪರುಷರ ಜೀವನಚರಿತ್ರೆ, ತತ್ವ ಸಿದ್ಧಾಂತಗಳ ಬಗ್ಗೆ ವಿದ್ಯಾರ್ಥಿಗಳು ಅಭ್ಯಸಿಸಬೇಕಿದೆ. ಆ ಮೂಲಕ ದೊರೆಯುವ ಸದ್ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಚಿಂತನೆ ಹರಿಸಬೇಕಿದೆ ಎಂದರು. ವಚನ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿ, ಪ್ರಸ್ತುತ ಸಮಾಜದಲ್ಲಿ ಅಶಾಂತಿ, ಅನಾಚಾರಗಳು ತಾಂಡವವಾಡುತ್ತಿವೆ. ಉತ್ತಮ ಬಾಂಧವ್ಯದ ಕೊರತೆಯಿಂದಾಗಿ ಮನುಷ್ಯರ ನಡುವೆ ಕಂದಕಗಳು ನಿರ್ಮಾಣವಾಗುತ್ತಿರುವದು ವಿಷಾದಕರ ಸಂಗತಿ. ಈ ಹಿನೆÀ್ನಲೆ ಭವಿಷ್ಯದ ನಿರ್ಮಾತೃಗಳಾದ ವಿದ್ಯಾರ್ಥಿಗಳಲ್ಲಿ ಸದ್ವಿಚಾರಗಳನ್ನು ಬೆಳೆಸಿ ಸಮಾಜದಲ್ಲಿ ಪ್ರೀತಿ, ವಿಶ್ವಾಸ ಒಡಮೂಡಿಸುವದು ವೇದಿಕೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕ ಕೆ.ಆರ್. ರಮೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.