ಶ್ರೀಮಂಗಲ, ನ. 18: ಜಿಲ್ಲೆಯಲ್ಲಿ ಸೊರಗಿರುವ ಕಾಂಗ್ರೆಸ್ ಪಕ್ಷವನ್ನು ಮುಂದಿನ ವಿಧಾನ ಸಭೆ, ಜಿ.ಪಂ, ತಾ.ಪಂ.ಗಳಲ್ಲಿ ಅಧಿಕಾರಕ್ಕೆ ತರಲು ಕಾಂಗ್ರೆಸ್ಸಿನ ನಿಷ್ಟಾವಂತ ಹಾಗೂ ಯುವ ಮುಖಂಡ ಶಿವು ಮಾದಪ್ಪ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಕುಟ್ಟದಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಕೆ.ಪಿ.ಸಿ.ಸಿ ವರಿಷ್ಠರನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕುಟ್ಟ ಸಮುದಾಯ ಭವನದಲ್ಲಿ ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್.ವೈ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿವು ಮಾದಪ್ಪ ಅವರು ತಮ್ಮ ತಂದೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಬಾಲಸುಬ್ರಮಣ್ಯ ಅವರ ನಿಧನದ ನಂತರ ಪಕ್ಷ ಕಟ್ಟುವ ಕೆಲಸದ ನಿಷ್ಠೆಯಿಂದ ತೊಡಗಿಸಿಕೊಂಡಿದ್ದಾರೆ. ಕುಟ್ಟ ವಲಯ ಯೂತ್ ಕಾಂಗ್ರೆಸ್, ಕುಟ್ಟ ವಲಯ ಕಾಂಗ್ರೆಸ್, ಕುಟ್ಟ ಗ್ರಾ.ಪಂ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಶಿವು ಮಾದಪ್ಪ ಅವರು ಎಲ್ಲಾ ಜಾತಿ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸಿದ ಹಾಗೂ ತಳಮಟ್ಟದಿಂದಲೇ ಕಾರ್ಯಕರ್ತರನ್ನು ಒಗ್ಗೂಟಿಸುವ ಸಾಮಥ್ರ್ಯವನ್ನು ಶಿವು ಮಾದಪ್ಪ ಹೊಂದಿದ್ದಾರೆ ಎಂದು ಸಭೆಯಲ್ಲಿ ಪ್ರಮುಖರು ಅಭಿಪ್ರಾಯ ಪಟ್ಟರು.

ಕಳೆದ ಎರಡು ಜಿ.ಪಂ ಅವಧಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಿವು ಮಾದಪ್ಪ ಅವರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಳ್ಳಿಯಿಂದ ದೆಹಲಿ ಮಟ್ಟದವರೆಗೆ ಪಕ್ಷದ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಇವರಿಗೆ ಬಹುಭಾಷಾ ಜ್ಞಾನ ಹಾಗೂ ಉನ್ನತ ಶಿಕ್ಷಣ ಸಹ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಸಹಕಾರಿಯಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ತಳಮಟ್ಟದಿಂದ ಸಂಘಟಿಸಿ ಕಾಂಗ್ರೆಸ್ ಪಕ್ಷವನ್ನು ಸಧÀೃಡವಾಗಿ ಬೆಳೆಸಲು ಹಾಗೂ ಪಕ್ಷದಿಂದ ದೂರವಾಗುತ್ತಿರುವ ಯುವ ಸಮುದಾಯವನ್ನು ಪಕ್ಷಕ್ಕೆ ಸೆಳೆಯಲು ಶಿವು ಮಾದಪ್ಪರಂತಹ ಯುವ ಮುಖಂಡರಿಗೆ ಕೆ.ಪಿ.ಸಿ.ಸಿ ವರಿಷ್ಠರು ಶಿವು ಮಾದಪ್ಪರವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಲು ನಿರ್ಧರಿಸಲಾಯಿತು.

ಜಾತಿ ಬೇಧ ಬೇಡ

ಜಿಲ್ಲೆಯ ಕಾಂಗ್ರೆಸ್ಸಿನಲ್ಲಿ ಕೊಡವರು ಹಾಗೂ ಕೊಡವೇತರರು ಎಂಬ ಯಾವದೇ ಬೇದ ಭಾವನೆ ಇಲ್ಲ. ಇತ್ತೀಚೆಗೆ ಕೊಡವೇತರರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಸಭೆ ನಡೆಸಿರುವದು ಸರಿಯಲ್ಲ. ಪಕ್ಷವನ್ನು ಸಂಘಟಿಸಿ ಬೆಳೆಸಿ ಅಧಿಕಾರಕ್ಕೆ ತರುವದು ಮುಖ್ಯವೇ ಹೊರತು ಜಾತಿ ಆಧಾರದಲ್ಲಿ ಪಕ್ಷದಲ್ಲಿ ಒಡಕು ಮೂಡಿಸುವ ಯಾವದೇ ಕೆಲಸವನ್ನು ಖಂಡಿಸುವದಾಗಿ ಸಭೆಯಲ್ಲಿದ್ದ ಪ್ರಮುಖರು ಹೇಳಿದರು.

ಸಭೆಯಲ್ಲಿ ಕುಟ್ಟ ಗ್ರಾ.ಪಂ. ಅಧ್ಯಕ್ಷೆ ವಿ.ಪಿ.ಲೀಲಾ ಪ್ರಭು, ಉಪಾಧ್ಯಕ್ಷ ಹೊಟ್ಟೆಂಗಡ ಪ್ರಕಾಶ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕೆ.ಕೆ.ಮೊಯಿದಿನ್, ಎಸ್.ಎನ್.ಡಿ.ಪಿ. ಸಂಚಾಲಕ ಪಿ.ಕೆ ಅರುಣ್ ಕುಮಾರ್, ಕಟ್ಟಡ ಹಾಗೂ ತೋಟ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜು, ಕುಟ್ಟ ಯುವ ಕಾಂಗ್ರೆಸ್ ಅಧ್ಯಕ್ಷ ಟಿ.ಬಿ. ಗಿರೀಶ್ ಅಣ್ಣಯ್ಯ, ಕರ್ನಾಟಕ ಮೂಲ ಆದಿವಾಸಿ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಬಿ. ರಂಜಿತ್ ಕುಮಾರ್, ಗ್ರಾ.ಪಂ. ಸದಸ್ಯೆ ರುಕ್ಮಿಣಿ ನಂಜಪ್ಪ, ಗಿರಿಜನ ಮುಖಂಡ ಬಿ.ಕೆ.ಮಾರ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷೆ ತಂಗಮ್ಮ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.