ಮಡಿಕೇರಿ, ನ. 27: ಸೇನೆ ಮತ್ತು ಕ್ರೀಡೆಗೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅಭಿಪ್ರಾಯಪಟ್ಟರು.

ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 18ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕೊಡಗು ಜಿಲ್ಲೆ ಸೇನಾ ಮತ್ತು ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಅದ್ವಿತೀಯ ಕೊಡಗು ನೀಡಿದೆ. ಸಂಸ್ಕøತಿಯಲ್ಲೂ ಕೊಡಗು ನಗರದ ಹೃದಯ ಭಾಗದಲ್ಲಿರುವ ಜ. ತಿಮ್ಮಯ್ಯ ಪಬ್ಲಿಕ್ ಶಾಲೆ ಉತ್ತಮ ಫಲಿತಾಂಶವನ್ನು ಪಡೆಯುತ್ತಿದೆ. ಆದರೆ ಶಾಲೆಯ ಮೈದಾನದ ಕೊರತೆಯಿದೆ. ಕೊಡವ ಸಮಾಜದ ವತಿಯಿಂದ ಶಾಲೆಗೆ ಸುಸಜ್ಜಿತ ಮೈದಾನದ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಮೈದಾನ ಒದಗಿಸಲು ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸರಸ್ವತಿ ಮಾತನಾಡಿ, ಪ್ರಸ್ತುತ ಶಾಲೆಯಲ್ಲಿ ನರ್ಸರಿಯಿಂದ 10ನೇ ತರಗತಿವರೆಗೆ 530 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 21 ಶಿಕ್ಷಕರ ತಂಡ ಕಾರ್ಯನಿರ್ವಹಿಸುತ್ತಿದ್ದಾರೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಶಾಲೆಗೆ ಉತ್ತಮ ಫಲಿತಾಂಶ ಲಭಿಸುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.

ಕೊಡವ ಸಮಾಜ ಉಪಾಧ್ಯಕ್ಷ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮಣವಟ್ಟೀರ ಚಿನ್ನಪ್ಪ, ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ಮಂಡೇಪಂಡ ಕುಟ್ಟಯ್ಯ, ಕೂತಂಡ ಉತ್ತಪ್ಪ, ಮಾಚಂಡ ಚಂಗಪ್ಪ, ಬೊಳ್ಳಜೀರ ಅಯ್ಯಪ್ಪ, ಮಾದೇಟಿರ ಬೆಳ್ಯಪ್ಪ ಮತ್ತಿತರರು ಹಾಜರಿದ್ದರು.