ಮೂರ್ನಾಡು, ಜೂ. 23: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ನೀಡಲಾಯಿತು.
ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬೇತು ಶಾಲೆಗೆ ವರ್ಗಾವಣೆಗೊಂಡ ಬಿ.ಪಿ. ಮಮತ ಹಾಗೂ ಕಿಗ್ಗಾಲು ಶಾಲೆಗೆ ವರ್ಗಾವಣೆಗೊಂಡ ಪಿ.ಎಂ. ಮಮತ ಅವರನ್ನು ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ವತಿಯಿಂದ ಸನ್ಮಾನಿಸಿ, ಕಿರುಕಾಣಿಕೆ ನೀಡಿ ಬೀಳ್ಕೊಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಸರೋಜ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎ.ಟಿ. ಸುರೇಶ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಕೆ.ಎಂ. ಪಾರ್ವತಿ, ಕೆ.ವೈ. ನಂದಿತ, ಪುಷ್ಪಲತಾ ಅವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವರ್ಗಾವಣೆಗೊಂಡ ಶಿಕ್ಷಕಿ ಪಿ.ಎಂ. ಮಮತ ಶಾಲೆಗೆ 20 ಲೀ. ಕುಕ್ಕರ್ ಹಾಗೂ ಬಿ.ಪಿ. ಮಮತ ದತ್ತಿ ನಿಧಿಯನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.