ಪ್ರಯತ್ನದಿಂದ ಬರ ಪರಿಹಾರ ನಿಧಿಯಿಂದ ಸಿದ್ದಾಪುರ ಭಾಗದಲ್ಲಿ 3 ಕೊಳವೆಬಾವಿ ಕೊರೆಯಲಾಗಿದ್ದು, ಜಿ.ಪಂ ಸದಸ್ಯೆ ಸರಿತಾ ಪೂಣಚ್ಚ ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿರುವದಾಗಿ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಜಿ.ಪಂ ಚುನಾವಣೆಗೆ ಸ್ಪರ್ಧಿಸಿ ಮತಯಾಚನೆಗೆ ತೆರಳಿದ ಸಂದರ್ಭ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಜನರು ತಿಳಿಸಿದ್ದರು. ಹೀಗಾಗಿ ಶಾಸಕ ಕೆ.ಜಿ ಬೋಪಯ್ಯ ಅವರ ಗಮನಕ್ಕೆ ತಂದಿದ್ದ ಹಿನ್ನೆಲೆಯಲ್ಲಿ ಬರ ಪರಿಹಾರ ನಿಧಿಯಿಂದ ಶಾಸಕರು ಸಿದ್ಧಾಪುರ ಭಾಗಕ್ಕೆ 3 ಕೊಳವೆ ಬಾವಿ ಕೊರೆಸಲು ಪ್ರಯತ್ನಿಸಿದರು. ಆದರೆ ಜಿ.ಪಂ.ನಿಂದ ಯಾವದೇ ಅನುದಾನ ಇಲ್ಲದಿದ್ದರೂ ಕೊಳವೆ ಬಾವಿಗೆ ತಾನೇ ಅನುದಾನ ತಂದಿರುವದಾಗಿ ಹೇಳುತ್ತಿದ್ದು, ಬಿಟ್ಟಿ ಪ್ರಚಾರ ಪಡೆಯುತ್ತಿರುವದು ಹಾಸ್ಯಾಸ್ಪದವಾಗಿದೆ. ಶಾಸಕರು ಹಾಗೂ ಕರಡಿಗೋಡು ಕ್ಷೇತ್ರದ ತಾ.ಪಂ ಸದಸ್ಯ ಜನೀಶ್ ಅವರನ್ನು ಭೂಮಿಪೂಜೆಗೆ ಕರೆಸುವ ಕನಿಷ್ಟ ಸೌಜನ್ಯವೂ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಜವಾಬ್ದಾರಿ ಸ್ಥಾನದಲ್ಲಿರುವ ಗ್ರಾ.ಪಂ ಅಧ್ಯಕ್ಷ ಎಂ.ಕೆ. ಮಣಿ, ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚರು ಅನುದಾನ ನೀಡಿದ್ದು, ಪತ್ರಿಕೆಯಲ್ಲಿ ಅಭಿನಂದನೆ ಯನ್ನು ಕೋರಿದ್ದಾರೆ. ಅನುದಾನ ಯಾವ ಇಲಾಖೆಯಿಂದ ಬಂದಿದೆ ಎಂಬ ಕನಿಷ್ಟ ಜ್ಞಾನವೂ ಅಧ್ಯಕ್ಷ ರಿಗಿಲ್ಲವೇ ಎಂದು ಆರೋಪಿಸಿದರು. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸಗಳ ವಿಲೇವಾರಿಯಾಗದಿದ್ದು, ಗ್ರಾ.ಪಂ. ಆವರಣದಲ್ಲೇ ಕಸ ವಿಲೇವಾರಿ ಮಾಡುತ್ತಿದ್ದು, ಈ ಹಿಂದೆ ಶಾಸಕರ ಸ್ವಪ್ರಯತ್ನದಿಂದ ಅರಣ್ಯದಂಚಿನಲ್ಲಿ ಕಸ ವಿಲೇವಾರಿ ಮಾಡಲಾಗಿತ್ತು. ಇದೀಗ ಮತ್ತೆ ಕಸದ ವಿಲೇವಾರಿ ಸಮಸ್ಯೆ ಎದುರಾಗಿದ್ದು, ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಕಸ ವಿಲೇವಾರಿಗೆ ಜಾಗದ ವ್ಯವಸ್ಥೆ ಕಲ್ಪಿಸಲಿ ಎಂದು ಸವಾಲೆಸೆದರು.

ಇನ್ನೋರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಎಂ.ಕೆ.ಮಣಿ ನಾಲ್ವರು ಹಿಂಬಾಲಕರನ್ನಿಟ್ಟು ಜಿ.ಪಂ ಸದಸ್ಯರನ್ನು ಓಲೈಕೆ ಮಾಡುತ್ತಿದ್ದು, ತಾ.ಪಂ. ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬೇರ್ಯಾವದೋ ನಾಯಕರನ್ನು ಕಡೆಗಣಿಸಿ, ತಮ್ಮ ನಾಯಕರು ಸರಿತಾ ಪೂಣಚ್ಚ ಎಂದು ಬಿಂಬಿಸಲು ಕಸರತ್ತು ನಡೆಸುತ್ತಿದ್ದಾರೆ. ಮುಂದಿನ ದಿನದಲ್ಲಿ ತಾ.ಪಂ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕೆಂದು ಒತ್ತಾಯಿಸಿದರಲ್ಲದೇ, ಸಂಸದರು, ಶಾಸಕರು, ಪರಿಷತ್ ಸದಸ್ಯರು, ಜಿ.ಪಂ., ತಾ.ಪಂ.ನಲ್ಲಿ ಬಿ.ಜೆ.ಪಿ ಆಡಳಿತವಿದ್ದು, ಅಭಿವೃದ್ಧಿಗೆ ಬಿ.ಜೆ.ಪಿ ಪಕ್ಷದ ಸಹಕಾರ ಅಗತ್ಯ ಎಂದರು.

ತಾ.ಪಂ. ಸದಸ್ಯ ಕೆ.ಎಂ.ಜನೀಶ್ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮರೆತು ಕೆಲಸ ಮಾಡಬೇಕಾಗಿದ್ದು, ತಾನು ಅಭಿವೃದ್ಧಿಗೆ ಸಹಕಾರ ನೀಡುವದಾಗಿ ತಿಳಿಸಿದರು. ಗ್ರಾ.ಪಂ. ಅಧ್ಯಕ್ಷ ಮಣಿ ಅವರು ಗ್ರಾಮದ ಅಭಿವೃದ್ಧಿಗೆ ಕಡೆಗಣಿಸುತ್ತಿದ್ದು, ಯಾವದೇ ಸಮಾರಂಭ ಹಾಗೂ ಭೂಮಿ ಪೂಜೆಗೆ ತನ್ನ ಗಮನಕ್ಕೆ ತರುತ್ತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಅನಿಲ್ ಶೆಟ್ಟಿ, ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಭಾಕರ, ಪಕ್ಷದ ಮುಖಂಡರಾದ ಕೆ.ಡಿ.ನಾಣಯ್ಯ, ಪಂದಿಕಂಡ ಅಶೋಕ್, ಎಂ.ಎ.ಆನಂದ, ಶೇಷಪ್ಪ ಇದ್ದರು.

-ಎ.ಎನ್.ವಾಸು