ಸೋಮವಾರಪೇಟೆ, ನ. 23: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಳೆದ 18 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಇವರ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡುವ ಬ್ಲಾಕ್ ಕಾಂಗ್ರೆಸ್, ಅವರದೇ ಪಕ್ಷ ಕಳೆದ 60 ವರ್ಷಗಳಿಂದ ಅಧಿಕಾರದಲ್ಲಿದ್ದು, ಯಾವ ಸಾಧನೆ ಮಾಡಿದ್ದಾರೆ? ಕುಗ್ರಾಮಗಳೇಕೆ ಅಭಿವೃದ್ಧಿಯಾಗಿಲ್ಲ ಎಂಬದನ್ನು ಸಮಾಜಕ್ಕೆ ತಿಳಿಸಲಿ ಎಂದು ಬಿಜೆಪಿ ಪಕ್ಷದ ಪ್ರಮುಖರುಗಳು ತಿರುಗೇಟು ನೀಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್, ಕಳೆದ ಸಾಲಿನಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಶಾಸಕ/ಸಚಿವರಾಗಿದ್ದ ಶಾಸಕದ್ವಯರು 1800 ಕೋಟಿ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಮುನ್ನುಡಿ ಯಾಗಿದ್ದಾರೆ. ಈ ಬಗ್ಗೆ ಶ್ವೇತಪತ್ರ ವನ್ನೂ ಹೊರಡಿಸಲಾಗಿತ್ತು. ಇದೀಗ 1800 ಕೋಟಿ ಅನುದಾನದ ಬಗ್ಗೆ ಟೀಕಿಸುವ ಭರದಲ್ಲಿ, ಅಷ್ಟೊಂದು ಅನುದಾನ ಬಂದಿದ್ದರೆ ಎಲ್ಲಾ ರಸ್ತೆಗಳೂ ಕಾಂಕ್ರಿಟೀಕರಣ ಗೊಳ್ಳುತ್ತಿದ್ದವು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಅವರು ಹೇಳಿಕೆ ನೀಡುತ್ತಿರುವದು ಕ್ಷುಲ್ಲಕವಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವದು ಮಾತ್ರ ಅಭಿವೃದ್ಧಿಯೇ? ಎಂದು ಅಭಿಮನ್ಯುಕುಮಾರ್ ಪ್ರಶ್ನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲ. ಶಿಕ್ಷಣ, ವೈದ್ಯಕೀಯ, ನೀರು, ಉದ್ಯಾನವನ, ರಸ್ತೆಗಳೂ ಸೇರಿದಂತೆ ಕಳೆದ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆದಿದೆ. ಕಳೆದ 18 ವರ್ಷದ ಅವಧಿಯಲ್ಲಿ 5 ವರ್ಷ ಮಾತ್ರ ಬಿಜೆಪಿ ಅಧಿಕಾರದಲ್ಲಿತ್ತು. ಉಳಿದ ಅವಧಿ ಸೇರಿದಂತೆ ಸ್ವಾತಂತ್ರ್ಯಾನಂತರದ 60 ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರ ದಲ್ಲಿತ್ತು. ಅಭಿವೃದ್ಧಿಯ ಸ್ಪಷ್ಟ ಕಲ್ಪನೆ ಇದ್ದಿದ್ದರೆ ಇಂದಿಗೂ ಕೊಡಗಿನಲ್ಲಿ ಕುಗ್ರಾಮಗಳೇ ಇರುತ್ತಿರಲಿಲ್ಲ. ಇದೇನಾ ಕಾಂಗ್ರೆಸ್ ಸರ್ಕಾರ ಸಾಧನೆ? ಎಂದು ಪ್ರಶ್ನಿಸಿದರು.
ಕಳೆದ 18 ವರ್ಷಗಳಿಂದ ರಂಜನ್ ಅವರನ್ನು ಕ್ಷೇತ್ರದ ಜನ ಗೆಲ್ಲಿಸಿದ್ದಾರೆ. ಅಭಿವೃದ್ಧಿ ಮಾಡದೇ ಇದ್ದಿದ್ದರೆ, ಜನತೆಯ ಕಷ್ಟಕ್ಕೆ ನೆರವಾಗದೇ ಇದ್ದಿದ್ದರೆ ಈ ಗೆಲುವು ಸಾಧ್ಯವಿತ್ತೇ? ಈ ಬಾರಿಯೂ ಮಡಿಕೇರಿ ಕ್ಷೇತ್ರದಿಂದ ರಂಜನ್ ಸ್ಪರ್ಧಿಸಿ ಗೆದ್ದು, ಯಡಿಯೂರಪ್ಪ ಆಡಳಿತದಲ್ಲಿ ಸಚಿವರಾಗಿ ಕೊಡಗಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಅಭಿಮನ್ಯುಕುಮಾರ್ ಭರವಸೆ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಹಿಂದೂಪರ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಇತ್ತೀಚೆಗೆ ಸೋಮವಾರಪೇಟೆ ಹಾಗೂ ವೀರಾಜಪೇಟೆಯಲ್ಲೂ ಅನ್ಯ ಕೋಮಿನ ಯುವಕರಿಂದ ಹಲ್ಲೆ ನಡೆದಿದೆ. ಐಗೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ಬೀದಿಗಿಳಿದು ಹೋರಾಟ ನಡೆಸುವದನ್ನೇ ಕಾಂಗ್ರೆಸ್ಸಿಗರು ತಪ್ಪು ಎನ್ನುವದಾದರೆ ಅಂತಹ ತಪ್ಪನ್ನು ಬಿಜೆಪಿ ಮಾಡುತ್ತಲೇ ಇರುತ್ತದೆ. ಐಗೂರಿನ ಮಸೀದಿ ಹಾಗೂ ಕಾರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಯಾವದೇ ಕೋಮಿಗೆ ಸೇರಿದ್ದರೂ ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸುತ್ತಲೇ ಬರುತ್ತಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ತಾಲೂಕು ವಕ್ತಾರ ಕೆ.ಜಿ. ಸುರೇಶ್, ಕಾರ್ಯದರ್ಶಿ ಮನುಕುಮಾರ್ ರೈ, ನಗರಾಧ್ಯಕ್ಷ ಸೋಮೇಶ್, ಜಿಲ್ಲಾ ಯುವ ಮೋರ್ಚಾ ಪ್ರಮುಖ ಕಿಬ್ಬೆಟ್ಟ ಮಧು ಅವರುಗಳು ಉಪಸ್ಥಿತರಿದ್ದರು.