ಸಿದ್ದಾಪುರ, ಡಿ. 20: ದಿಡ್ಡಳ್ಳಿ ಆದಿವಾಸಿಗಳ ಗುಡಿಸಲು ತೆರವು ಗೊಳಿಸಿದ ಘಟನೆಯ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಶಾಶ್ವತ ಸೂರು ಒದಗಿಸಿಕೊಡುವದಾಗಿ ರಾಜ್ಯ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಎ.ಮಂಜು ಭರವಸೆ ನೀಡಿದ್ದಾರೆ.ಮಾಲ್ದಾರೆ ಸಮೀಪದ ದಿಡ್ಡಳ್ಳಿಗೆ ಭೇಟಿ ನೀಡಿ ಗಿರಿಜನರ ಸಮಸ್ಯೆಯನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ದಿಡ್ಡಳ್ಳಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಗಿರಿಜನರನ್ನು ಏಕಾಏಕಿ ತೆರವು ಗೊಳಿಸಿರುವ ಘಟನೆ ದುಃಖಕರ ವಾಗಿದ್ದು, ಕರ್ನಾಟಕದಲ್ಲಿ ಇಂತಹ ಘಟನೆ ನಡೆದಿರುವದಕ್ಕೆ ವಿಷಾದ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಏಕಾಏಕಿ ಗಿರಿಜನರನ್ನು ತೆರವು ಗೊಳಿಸಿರುವ ಘಟನೆಯನ್ನು ಖಂಡಿಸಿದರು. ಗಿರಿಜನರ ಮೇಲೆ ದೌರ್ಜನ್ಯವೆಸಗಿದೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವದಾಗಿ ಅವರು ತಿಳಿಸಿದರು. ನಿರಾಶ್ರಿತ ಗಿರಿಜನರಿಗೆ ಪಕ್ಷಾತೀತವಾಗಿ ಬೆಂಬಲ ನೀಡಬೇಕು. ಈ ವಿಚಾರವನ್ನು ರಾಜಕೀಯ ಪ್ರತಿಷ್ಠೆಗೆ ಬಳಸಬಾರದು. ರಾಜ್ಯಾದ್ಯಂತ ಶ್ರೀಮಂತರು ನೂರಾರು ಏಕರೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಲು ಕಂದಾಯ ಸಚಿವರು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ದಿಡ್ಡಳ್ಳಿಯ ನಿರಾಶ್ರಿತರಿಗೆ ಕಾನೂನಿನಲ್ಲಿ ಅವಕಾಶವಿದ್ದಲ್ಲಿ ಗಿರಿಜನರು ಗುಡಿಸಲು ಕಟ್ಟಿಕೊಂಡ ಪ್ರದೇಶದಲ್ಲೇ ನಿವೇಶನ ನೀಡಲು ಮುಖ್ಯಮಂತ್ರಿಯ ಗಮನ ಸೆಳೆಯುವದಾಗಿ ಅವರು ತಿಳಿಸಿದರು. ಇದೇ ಸಂದರ್ಭ
(ಮೊದಲ ಪುಟದಿಂದ) ದಿಡ್ಡಳ್ಳಿಯಲ್ಲಿ ತಾತ್ಕಾಲಿಕವಾಗಿ ವಾಸವಾಗಿರುವ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಪಡಿತರ ವಿತರಿಸಲು ಸಮಾಜ ಕಲ್ಯಾಣ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಗಿರಿಜನ ಮುಖಂಡೆ ಮುತ್ತಮ್ಮ ಮಾತನಾಡಿ, ಸರಕಾರ ಈವರೆಗೂ ಶಾಶ್ವತ ಸೂರು ಒದಗಿಸುವಲ್ಲಿ ವಿಫಲವಾಗಿದೆ. ನೆಲದಲ್ಲಿ ಕುಳಿತುಕೊಂಡು ಚರ್ಚೆ ಮಾಡಿ ಎಂದು ಸಚಿವ ಮಂಜು ಅವರನ್ನು ಒತ್ತಾಯಿಸಿದರು. ಇಷ್ಟು ದಿನಗಳಾದರೂ ಸರಕಾರಕ್ಕೆ ಕಣ್ಣು ಕಾಣುವದಿಲ್ಲವೇ ಎಂದು ಪ್ರಶ್ನಿಸಿದ ಅವರು, ಅರಣ್ಯ ಇಲಾಖೆಯು ಭೂ ಮಾಲಿಕರ ಕುಮ್ಮಕ್ಕಿನಿಂದ ನಮ್ಮನ್ನು ತೆರವುಗೊಳಿಸಿದೆ ಎಂದರು. ಇಲ್ಲಿನ ನಿರಾಶ್ರಿತ 577 ಕುಟುಂಬಕ್ಕೂ ಪ್ಲಾಸ್ಟಿಕ್ ಹೊದಿಕೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಮಾಯಾದೇವಿ ಗಲಗಲಿ 577 ಕುಟುಂಬಕ್ಕೂ ಹೊದಿಕೆ ನೀಡುವದಾಗಿ ಭರವಸೆ ನೀಡಿದರು.
ಆತ್ಮಹತ್ಯೆ ಬೆದರಿಕೆ: ಸಚಿವ ಎ.ಮಂಜು ದಿಡ್ಡಳ್ಳಿ ನಿರಾಶ್ರಿತರ ಪ್ರದೇಶಕ್ಕೆ ಭೇಟಿ ನೀಡಿ ಗಿರಿಜನರ ಸಮಸ್ಯೆ ಆಲಿಸಿದ ಸಂದರ್ಭ ಗುಡಿಸಲನ್ನು ಕಳೆದುಕೊಂಡ ನಿರಾಶ್ರಿತ ಸ್ವಾಮಿ ಮಾತನಾಡಿ, ನಮಗೆ ದಿಡ್ಡಳ್ಳಿಯ ಅರಣ್ಯದಲ್ಲೇ ನಿವೇಶನ ನೀಡಿ. ಇಲ್ಲವಾದಲ್ಲಿ ನಾವುಗಳು ನೀರಿನಲ್ಲಿ ವಿಷ ಬೆರೆಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ ಪ್ರಸಂಗವೂ ನಡೆಯಿತು.