ಸಿದ್ದಾಪುರ, ಜ. 21: ದಿಡ್ಡಳ್ಳಿಯ ಆದಿವಾಸಿಗಳ ಸಮಸ್ಯೆಗಳು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಶಾಶ್ವತ ಸೂರು ಸಿಗುವ ನಿರೀಕ್ಷೆಯಲ್ಲಿ ಗಿರಿಜನರು ಮರದ ಕೆಳಗೆ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಲ್ದಾರೆ ಅರಣ್ಯ ವಾಪ್ತಿಯ ದಿಡ್ಡಳ್ಳಿಯಲ್ಲಿ ಡಿ. 7 ರಂದು ಪೊಲೀಸ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಜೆ.ಸಿ.ಬಿ. ಮೂಲಕ ತೆರವುಗೊಳಿಸಿದ್ದರು. ಬಳಿಕ ಗುಡಿಸಲು ಕಳೆದುಕೊಂಡ ಆದಿವಾಸಿಗಳು ಹೋರಾಟದ ಹಾದಿ ಹಿಡಿದುದ್ದಲ್ಲದೇ, ಆದಿವಾಸಿಗಳಿಗೆ ಜಿಲ್ಲೆ ಹಾಗೂ ರಾಜ್ಯದ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರು.
ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ, ವಿವಿಧ ರಾಜಕೀಯ ಪಕ್ಷದ ರಾಜ್ಯ ಮುಖಂಡರು ಸೇರಿದಂತೆ ಹಲವು ಅಧಿಕಾರಿಗಳು ದಿಡ್ಡಳ್ಳಿಗೆ ಭೇಟಿ ನೀಡಿದ್ದರು.
ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದ್ದಂತೆ ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವ ಆಂಜನೇಯ ದಿಡ್ಡಳ್ಳಿಗೆ ಭೇಟಿ ನೀಡಿ ಒಂದು ತಿಂಗಳಲ್ಲಿ ಶಾಶ್ವತ ಸೂರು ಒದಗಿಸುವ ಬಗ್ಗೆ ಭರವಸೆ ನೀಡಿದರು. ಆದಿವಾಸಿಗಳ ತಾತ್ಕಾಲಿಕ ವಾಸಕ್ಕೆ ಕುಡಿಯುವ ನೀರು, ಶೌಚಾಲಯ, ಪ್ಲಾಸ್ಟಿಕ್ ಹೊದಿಕೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಇಲಾಖೆಯಿಂದ ರೂ. 1 ಕೋಟಿ ಬಿಡುಗಡೆ ಮಾಡಿದ್ದರು. ದಿಡ್ಡಳ್ಳಿಯ ಆಶ್ರಮ ಶಾಲೆಯ ಸಮೀಪದಲ್ಲೇ ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆ ಒದಗಿಸಿದ್ದು, ಮಕ್ಕಳಿಗೆ ಸ್ವೆಟರ್, ಗಿರಿಜನರಿಗೆ ಹೊದಿಕೆ ಸೇರಿದಂತೆ ದಿನನಿತ್ಯ ಬಳಕೆಗೆ ಬೇಕಾದ ಸಾಮಗ್ರಿಗಳನ್ನು ವಿತರಿಸಲಾಗಿತ್ತು.
ಇದೀಗ ಹೋರಾಟ ಕೈಬಿಟ್ಟು ತಿಂಗಳಾಗುತ್ತಾ ಬರುತ್ತಿದ್ದು, ಸರಕಾರ ನೀಡಿದ ಭರವಸೆ ಹಾಗೆಯೇ ಉಳಿದಿದೆ. ಕಂದಾಯ ಅಧಿಕಾರಿಗಳು ಇತ್ತೀಚೆಗಷ್ಟೆ ಖಾಸಗಿ ಜಾಗ ಖರೀದಿಸಲು ಹೇಳಿಕೆ ನೀಡಿದ್ದು, ಭೂಮಿಯನ್ನು ಸರಕಾರದ ವಶಕ್ಕೆ ಪಡೆದು, ಗಿರಿಜನರಿಗೆ ಹಂಚುವದು ಯಾವಾಗ ಎಂಬ ಪ್ರಶ್ನೆ ಎದುರಾಗಿದೆ. ಮತ್ತೊಂದೆಡೆ ಗಿರಿಜನರು ಚಳಿಯಲ್ಲಿ ನೆಲದ ಮೇಲೆ ಮಲಗಿ ಶಾಶ್ವತ ಸೂರಿನ ಕನಸು ಕಾಣುತ್ತಿದ್ದಾರೆ.
ಇತ್ತೀಚೆಗೆ ಕುಶಾಲನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಆದಿವಾಸಿ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಸಭೆಯಲ್ಲಿ ಜಿಲ್ಲೆಯ 3 ತಾಲೂಕಿನ ಪೈಸಾರಿ ಜಾಗದಲ್ಲಿ ಶಾಶ್ವತ ನಿವೇಶನ ನೀಡುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಹಾಗೂ ಗಿರಿಜನ ಮುಖಂಡರು ಮಡಿಕೇರಿಯಲ್ಲಿ ಸಭೆ ನಡೆಸಿ, ದಿಡ್ಡಳ್ಳಿಯ ನಿರಾಶ್ರಿತರಿಗೆ ದಿಡ್ಡಳ್ಳಿ ವ್ಯಾಪ್ತಿಯಲ್ಲಿಯೇ ನಿವೇಶನ ಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿರುವ ಬಗ್ಗೆ ಮಾಹಿತಿ ನೀಡಿದರು.
ಸರಕಾರ ಆದಿವಾಸಿಗಳಿಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಶಾಶ್ವತ ಭೂಮಿ ನೀಡಲು ತಯಾರಿದ್ದು, ಆದಿವಾಸಿಗಳು ಮಾತ್ರ ತಮಗೆ ದಿಡ್ಡಳ್ಳಿಯಲ್ಲಿಯೇ ಭೂಮಿ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ. ಹೀಗಾಗಿ ದಿಡ್ಡಳ್ಳಿ ನಿರಾಶ್ರಿತರಿಗೆ ಶಾಶ್ವತ ಭೂಮಿ ಯಾವಾಗ ಎಂಬದು ಕಗ್ಗಂಟಾಗಿಯೇ ಉಳಿದಿದೆ.
ಈ ಹಿಂದೆ 577 ಕುಟುಂಬ ದಿಡ್ಡಳ್ಳಿಯಲ್ಲಿ ನಿರಾಶ್ರಿತರಾಗಿದ್ದು, ಇತ್ತೀಚೆಗೆ ಇನ್ನಷ್ಟು ಕುಟುಂಬಗಳು ಸೇರ್ಪಡೆಗೊಂಡು ಒಟ್ಟು 611 ಕುಟುಂಬ ದಿಡ್ಡಳ್ಳಿಯಲ್ಲಿ ತಾತ್ಕಾಲಿವಾಗಿ ವಾಸ ಮಾಡಿಕೊಂಡಿದ್ದಾರೆ. ಪ್ರಾರಂಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಯಾದೇವಿ ಗಲಗಲಿ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರಾಶ್ರಿತರಿಗೆ ಒಂದು ವಾರಗಳ ಕಾಲ ಗಂಜಿ ಕೇಂದ್ರವನ್ನು ತೆರೆಯಲಾಗಿತ್ತು. ನಿರಾಶ್ರಿತರಿಗೆ ದಿನದ ಮೂರು ಹೊತ್ತು ಆಹಾರ ನೀಡಲಾಗುತ್ತಿತ್ತು. ಬಳಿಕ ನಿರಾಶ್ರಿತ ಕುಟುಂಬಗಳಿಗೆ ಅಕ್ಕಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.
ಸರಕಾರ ಒಂದು ತಿಂಗಳಲ್ಲಿ ಶಾಶ್ವತ ಸೂರು ನೀಡುವ ಭರವಸೆ ನೀಡಿದೆ. ಇನ್ನೂ ಕೆಲವು ದಿನಗಳ ಕಾಲ ಕಾದು ನೋಡುತ್ತೇವೆ. ಬಳಿಕ ನೂರಾರು ಮಂದಿ ಬೆತ್ತಲೆ ಪ್ರತಿಭಟನೆ ನಡೆಸಲಾಗುವದು ಎಂದು ಗಿರಿಜನ ಮುಖಂಡರಾದ ಜೆ.ಕೆ. ಮುತ್ತಮ್ಮ ಹಾಗೂ ಸ್ವಾಮಿ ತಿಳಿಸಿದ್ದಾರೆ.
- ಎ.ಎನ್. ವಾಸು