ಸುಂಟಿಕೊಪ್ಪ, ಜು. 19: 7ನೇ ಹೊಸಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ರಾಸುಗಳ ಆಶ್ರಯ ತಾಣವಾಗಿದ್ದು, ಮಕ್ಕಳು ರಾಸುಗಳ ಗೊಬ್ಬರವನ್ನು ಸ್ವಚ್ಛಗೊಳಿಸಿ ಪಾಠಪ್ರವಚನ ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಸುಂಟಿಕೊಪ್ಪ - ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸುಂದರ ಪರಿಸರ ತಾಣದಲ್ಲಿ ಕಾರ್ಯಾಚರಿಸುತ್ತಿರುವ 7ನೇ ಹೊಸಕೋಟೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 200 ಕ್ಕೂ ಮಿಕ್ಕಿ ಸುತ್ತ-ಮುತ್ತಲಿನ ಗ್ರಾಮಗಳ ಬಡ ಕೂಲಿ ಕಾರ್ಮಿಕರ ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮಕ್ಕಳು ಮತ್ತು ಶಿಕ್ಷಕರು ದಿನನಿತ್ಯ ಮುಂಜಾನೆ ಶಾಲೆಗೆ ಬಂದು ಬಿಡಾಡಿ ಜಾನುವಾರುಗಳ ಗೊಬ್ಬರವನ್ನು ಬಾಚಿ ಶುಚಿಗೊಳಿಸುವ ಮೂಲಕ ಪಾಠ ಪ್ರವಚನಕ್ಕೆ ಅಣಿಯಾಗುವಂತಾಗಿದೆ.

ಹೊಸಕೋಟೆ ಸುತ್ತ ಮುತ್ತಲಿನ ನಿವಾಸಿಗಳು ಸಾಕಿರುವ ದನ ಕರುಗಳು ಮೇವು ಅರಸಿ ಬಂದು ರಾತ್ರಿಯ ವೇಳೆ ಶಾಲಾ ಆವರಣದಲ್ಲಿಯೇ ತಂಗುತ್ತಿದ್ದು, ಶಾಲಾ ಆವರಣವು ಬೆಳಿಗ್ಗೆ ಜಾನುವಾರಗಳÀ ಕೊಟ್ಟಿಗೆಯಂತೆ ಗೋಚರಿಸುತ್ತಿದೆ. ಹೀಗಾಗಿ ಈ ಶಾಲೆಯ ಪಾಠ ಪ್ರವಚನ ಗೋಮೂತ್ರ, ಗೊಬ್ಬರದ ನಡುವೆ ನಡೆಯುವಂತಾಗಿದೆ.

ಶಾಲೆಗೆ ಸೂಕ್ತ ಭದ್ರತೆ ಕೊರತೆ

ಕೇಂದ್ರ ಸರಕಾರದ ನಬಾರ್ಡ್ ವತಿಯಿಂದ ಗ್ರಾಮ ಸಡಕ್ ಯೋಜನೆಯಡಿ ನೂತನ ಹೊಸಕೋಟೆ, ತೊಂಡೂರು, ಉಪ್ಪುತೋಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ಆರಂಭಿಸಲಾಗಿದೆ.

ರಸ್ತೆಗೆ ಹೊಂದಿಕೊಂಡಂತೆ ಶಾಲೆಯ ಸುತ್ತಲೂ ಅಳವಡಿಸಲಾಗಿದ್ದ ತಡೆಗೋಡೆಯನ್ನು ತೆರವುಗೊಳಿಸಲಾಗಿದ್ದು, ಇದರಿಂದ ಶಾಲಾವರಣದಲ್ಲಿ ರಾಸುಗಳು ತಂಗುತ್ತಿದೆ. ಇದರಿಂದ ಶಾಲಾ ಕೊಠಡಿಗಳಿಗೆ ಮಕ್ಕಳು ತೆರಳಲಾಗದೆ ಮಕ್ಕಳು ಮತ್ತು ಶಿಕ್ಷಕರು ಅದನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ನಿತ್ಯ ತೊಡಗಿಸಿಕೊಂಡು ನಂತರ ಶಾಲಾಕೊಠಡಿಗಳಲ್ಲಿ ಕುಳಿತು ಪಾಠ ಪ್ರವಚನ ಆಲಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಕ್ಕಳ ಹಕ್ಕು ಕಾನೂನು ಅನ್ವಯಿಸುವದಿಲ್ಲವೇ...?

ಸರಕಾರ ಮಕ್ಕಳ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಹಲವಾರು ಕಾನೂನುಗಳಿದ್ದು, ಮಕ್ಕಳು ಶಾಲೆಗಳಲ್ಲಿ ಯಾವದೇ ಕೆಲಸ ನಿರ್ವಹಿಸುವಂತಿಲ್ಲ. ಆದರೆ ಈ ಶಾಲೆಯ ಮಕ್ಕಳು, ಶಿಕ್ಷಕರು ದಿನ ನಿತ್ಯ ಶಾಲೆಗೆ ಬಂದು ಜಾನುವಾರುಗಳ ಸಗಣಿಯನ್ನು ಬಾಚುತ್ತಿರುವದು ನಿತ್ಯ ಕಾಯಕವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಾಲೆಗೆ ಸುತ್ತ ತಾತ್ಕಲಿಕವಾಗಿ ತಂತಿ ಬೇಲಿಯನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.