ಸೋಮವಾರಪೇಟೆ, ಜ. 27: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಾಲಾ ಸಭಾಂಗಣ ಮತ್ತು ಒಕ್ಕಲಿಗರ ಸಮುದಾಯ ಭವನದಲ್ಲಿರುವ ಶ್ರೀಗಂಧ ಕನ್ವೆನ್ಷನ್ ಹಾಲ್ ತಾ. 28 ರಂದು ಉದ್ಘಾಟನೆಗೊಳ್ಳಲಿದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಹೇಳಿದರು. ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 28 ರಂದು ಬೆಳಿಗ್ಗೆ 10 ಗಂಟೆಗೆ ಸಭಾಂಗಣ, 11 ಗಂಟೆಗೆ ಕನ್ವೆನ್ಷನ್ ಹಾಲ್ನ ಉದ್ಘಾಟನೆಯನ್ನು ಹೆಚ್ಚಿನ ಅನುದಾನ ಕಲ್ಪಿಸಿರುವ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ನೆರವೇರಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಎ. ಮಂಜು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವ ಬಿ.ಎ. ಜೀವಿಜಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯೆ ಚಂದ್ರಕಲಾ ಪ್ರಸನ್ನ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಕೆ. ಶೇಖರ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಸೇರಿದಂತೆ ಭಾಗವಹಿಸಲಿದ್ದಾರೆ.
ಕಟ್ಟಡಗಳಿಗೆ ಧನ ಸಹಾಯ ಮಾಡಿದ ಚಿಕ್ಕಮಗಳೂರು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಂ.ಬಿ. ಕೃಷ್ಣೇಗೌಡ, ನಾಪಂಡ ಮುತ್ತಪ್ಪ, ಮುದ್ದಪ್ಪ, ಕೊತ್ನಳ್ಳಿ ಗ್ರಾಮದ ವಾಣಿ ಅರುಣ್, ಕೂತಿ ಗ್ರಾಮದ ಶೋಭಾ ರವಿಕುಮಾರ್, ಶಾಂತಳ್ಳಿಯ ವನಜಾ ರಾಮಚಂದ್ರ, ನಿವೃತ್ತ ಎ.ಇ.ಇ. ಜಿ.ಡಿ. ಜಯರಾಮ್, ಸುಳಿಮಳ್ತೆ ಗ್ರಾಮದ ಚಂದ್ರಾವತಿ ಪುಟ್ಟರಾಜು, ಎಂ.ಎನ್. ಪೂವಯ್ಯ, ಕಾನ್ವೆಂಟ್ ಬಾಣೆಯ ಆಶಾ ಯೋಗೇಂದ್ರ, ಹೆತ್ತೂರು ಗ್ರಾಮದ ಸುನೀತ ದೇವರಾಜು ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವದು ಎಂದು ಹೇಳಿದರು.
ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಅದೇ ದಿನ ಮಧ್ಯಾಹ್ನ 2.30 ಗಂಟೆಗೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎನ್.ಬಿ. ಗಣಪತಿ, ಸಿ.ಎಸ್. ಸುರೇಶ್. ಕೆ.ಟಿ. ಪರಮೇಶ್. ಕೆ.ಎನ್. ಪಾಪಯ್ಯ ಉಪಸ್ಥಿತರಿದ್ದರು.