ಮಡಿಕೇರಿ, ಸೆ.2 : ತಾ. 3 ರಂದು (ಇಂದು) ಕೈಲುಮುಹೂರ್ತ ಮತ್ತು ತಾ. 4, 5 ರಂದು ಗೌರಿ ಗಣೇಶ ಹಬ್ಬದ ಸಂಬಂಧ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ನಂತರ ಗಣೇಶ ವಿಗ್ರಹ ವಿಸರ್ಜನಾ ಕಾರ್ಯಕ್ರಮ, ತಾ. 12 ರಂದು ಬಕ್ರೀದ್ ಹಬ್ಬ ಆಚರಣೆ ಇದೆ. ಈ ಸಂಬಂಧ ಎಲ್ಲಾ ಗಣಪತಿ ಸಮಿತಿಯವರ ಮತ್ತು ವಿವಿಧ ಕೋಮಿನ ಮುಖಂಡರ ಸಭೆ ನಡೆಸಿ ಚರ್ಚಿಸಲಾಗಿದ್ದು, ಸಾರ್ವಜನಿಕರು ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ.

ಕೈಲು ಮುಹೂರ್ತ, ಗೌರಿ-ಗಣೇಶ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಂಟಿಂಗ್ಸ್ ಮತ್ತು ಬ್ಯಾನರ್‍ಗಳನ್ನು ಕಟ್ಟುವ ಬಗ್ಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವದು ಕಡ್ಡಾಯವಾಗಿದೆ.

ಈ ಹಬ್ಬಗಳ ಆಚರಣೆಗಳ ವೇಳೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆ ಕೊಡಗಿನ ಜನತೆಯಲ್ಲಿ ಪೊಲೀಸ್ ಇಲಾಖೆ ಕೋರಿದೆ.

ಪ್ರತಿಷ್ಠಾಪನೆ ವೇಳೆ: ಗಣೇಶ ಮೂರ್ತಿಗಳ ಪ್ರತಿಷ್ಠ್ಟಾಪನೆಯ ಬಗ್ಗೆ ನಗರಸಭೆ ಅಥವಾ ಸಂಬಂಧಪಟ್ಟ ಪಂಚಾಯತಿಗಳಿಂದ ಅನುಮತಿಯನ್ನು ಪಡೆದುಕೊಳ್ಳುವದು. ಗಣಪತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪ್ರತಿಷ್ಠಾಪನಾ ಸ್ಥಳ, ಪ್ರತಿಷ್ಠಾಪನೆ ಸಮಯ, ಸಮಿತಿಯ ಸಂಪೂರ್ಣ ವಿವರ, ಈ ಪ್ರತಿಷ್ಠಾಪನಾ ಸ್ಥಳಕ್ಕೆ ಸಂಬಂಧಿಸಿದವರಿಂದ ನಿರಾಪೇಕ್ಷಣಾ ಪತ್ರ, ವಿದ್ಯುತ್‍ಚ್ಛಕ್ತಿ ಇಲಾಖೆಯವರಿಂದ ಹಾಗೂ ಧÀ್ವನಿವರ್ಧಕ ಬಳಸಲು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಂದ ಪಡೆದ ಅನುಮತಿ ಪತ್ರ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ವಿವರವಾದ ಮಾಹಿತಿ ಸಾಕಷ್ಟು ಮುಂಚಿತವಾಗಿ ಸಂಬಂಧಿಸಿದ ಠಾಣೆಗೆ ನೀಡಬೇಕು, ಗಣಪತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸ್ವಯಂ ಸೇವಕರು ಅಥವಾ ಸದಸ್ಯರ ಸಹಾಯವನ್ನು ಪಡೆದು ಯಾವದೇ ಅಹಿತಕರ ಘಟನೆಗಳಿಗೆ ಆಸ್ಪದಕೊಡದಂತೆ ನಡೆದುಕೊಳ್ಳುವದು ಗಣಪತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಅಗ್ನಿ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮರಳು ಹಾಗೂ ನೀರನ್ನು ಶೇಖರಣೆ ಮಾಡಿಕೊಳ್ಳುವದು ಕಡ್ಡಾಯವಾಗಿದೆ.

ಏನು ಮಾಡಬಾರದು: ಗಣೇಶ ಮೂರ್ತಿಗಳನ್ನು ಸಾರ್ವಜನಿಕ ರಸ್ತೆಯಲ್ಲಿ, ಪಾದಚಾರಿ ಮಾರ್ಗದಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಯಾವದೇ ಸಂಘ ಸಂಸ್ಥೆ, ಖಾಸಗಿ ಅಥವಾ ವೈಯಕ್ತಿಕವಾಗಿ ಸಾರ್ವಜನಿಕರ ಗಣಪತಿ ಪ್ರತಿಷ್ಠಾಪನೆ ಸಂಬಂಧ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲು ಮಾಡುವಂತಿಲ್ಲ. ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ರೀತಿ ಯಾವದೇ ಪೆಂಡಾಲ್, ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಯಾವದೇ ರೀತಿ ಧ್ವನಿ ವರ್ಧಕ ಬಳಕೆ ಮಾಡುವಂತಿಲ್ಲ.

ಮೆರವಣಿಗೆ ವೇಳೆ: ಆಯೋಜಕರು ಗಣಪತಿ ವಿಸರ್ಜನೆಯ ಸಮಯದಲ್ಲಿ ಸ್ವಯಂ ಸೇವಕರು ಅಥವಾ ಸದಸ್ಯರ ಸಹಾಯವನ್ನು ಪಡೆದು ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವದು ಹಾಗೂ ಈ ಸ್ವಯಂ ಸೇವಕರು ಹಾಗೂ ಸದಸ್ಯರುಗಳಿಗೆ ಗುರುತಿನ ಚೀಟಿ, ಟಿ-ಶರ್ಟ್ ಅನ್ನು ನೀಡುವದು ಹಾಗೂ ಪೊಲೀಸ್ ಇಲಾಖೆಯವರೊಂದಿಗೆ ನಿರಂತರ ಸಂಪರ್ಕದಲ್ಲಿರುವದು, ಆಸ್ಪತ್ರೆ, ಶಾಲಾ ಕಾಲೇಜು ಹಾಗೂ ಪ್ರಾರ್ಥನಾ ಮಂದಿರದ ಮುಂದೆ, ಮೆರವಣಿಗೆ ತೆರಳುವಾಗ ಶಾಂತಿಯುತವಾಗಿ ವರ್ತಿಸಬೇಕು.

ಮೆರವಣಿಗೆ ವೇಳೆ ಕರ್ಕಶ ಶಬ್ಧ ಹೊಮ್ಮಿಸುವ ಧ್ವನಿವರ್ಧಕ, ಡಿಸ್ಕ್ ಜಾಕಿ ಸೌಂಡ್ ಸಿಸ್ಟಂ (ಡಿ.ಜೆ) ಬಳಸುವಂತಿಲ್ಲ., ಶಬ್ದ ಮಿತಿ 10 ಡಿಬಿ (ಎ) ಅಥವಾ ಕನಿಷ್ಟ 8 ಸಾವಿರ ಗರಿಷ್ಠ 10 ಸಾವಿರ ವ್ಯಾಟ್ ಮೀರಿರಬಾರದು. ಆಸ್ಪತ್ರೆ, ಶಾಲಾ ಕಾಲೇಜು ಹಾಗೂ ಪ್ರಾರ್ಥನಾ ಮಂದಿರದ ಮುಂದೆ, ಸಾರ್ವಜನಿಕ ಜನಸಂದಣಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ ಹಾಗೂ ಬಣ್ಣ ಎರಚಾಟ ಮಾಡುವಂತಿಲ್ಲ.

ಗಣೇಶ ಮೂರ್ತಿಗಳ ವಿಸರ್ಜನೆಯು ನಿಗಧಿತ ದಿನದಂದು ನಿಗಧಿತ ವೇಳೆಯಲ್ಲೇ ಆಗುವಂತೆ ಆಯೋಜಕರು ಜವಾಬ್ದಾರಿ ವಹಿಸಿಕೊಳ್ಳಬೇಕು, ವಿಸರ್ಜನೆ ವೇಳೆ ಈಜುಗಾರರನ್ನೇ ವಿಸರ್ಜನೆಯ ಬಗ್ಗೆ ನೇಮಿಸುವದು ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಲೈಫ್ ಜಾಕೆಟ್‍ಗಳನ್ನು ಉಪಯೋಗಿಸುವದು. ಈಗಾಗಲೇ ಸುಪ್ರಿಂಕೋರ್ಟ್ ಆದೇಶದಂತೆ ನಿಷೇಧಕ್ಕೆ ಒಳಪಟ್ಟಿರುವ ಡಿ.ಜೆ.ಸೌಂಡ್ ಸಿಸ್ಟಮ್ (ಡಿಸ್ಕ್ ಜಾಕಿ) ಅನ್ನು ವಸತಿ ಪ್ರದೇಶ ಹಾಗೂ ವಿಸರ್ಜನಾ ಸ್ಥಳದಲ್ಲಿ ಬಳಸದಂತೆ ತಿಳಿಯಪಡಿಸಲಾಗಿದೆ.

ವಿರ್ಸಜನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಮುಂಚಿತವಾಗಿ ನೀಡಿದ ದಿನಾಂಕವನ್ನು ಹೊರತುಪಡಿಸಿ ಬೇರೆ ದಿನಾಂಕಗಳಂದು ಮಾಡುವಂತಿಲ್ಲ ಮಕ್ಕಳು ಮತ್ತು ಈಜು ಬಾರದವರನ್ನು ನೀರಿಗೆ ಇಳಿಸುವಂತಿಲ್ಲ. ಸರ್ವೋಚ್ಚ ನ್ಯಾಯಾಲಯವು ನಿಗದಿ ಪಡಿಸಿರುವ ಶಬ್ಧ ಮಿತಿಯನ್ನು ಮೀರುವಂತಿಲ್ಲ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.