ಮಡಿಕೇರಿ, ಆ. 20: ದೇಶದಲ್ಲಿ ಅಶಾಂತಿ ಹಾಗೂ ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಹಿನ್ನೆಲೆ ಜನ ಜಾಗೃತಿ ಮೂಡಿಸುವದಕ್ಕಾಗಿ ಶಾಂತಿ ಮತ್ತು ಮಾನವೀಯತೆ ಎನ್ನುವ ರಾಷ್ಟ್ರೀಯ ಅಭಿಯಾನವನ್ನು ಜಮಾಅತೆ ಇಸ್ಲಾಮೀ ಹಿಂದ್ ಮೂಲಕ ಹಮ್ಮಿ ಕೊಂಡಿರುವದಾಗಿ ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹಮಾನ್ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆಯ ಸೌಂದರ್ಯ ಮರೆ ಯಾಗುತ್ತಿದ್ದು, ಹಿಂಸೆ ತಾಂಡವ ವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಗೃಹ ಸಚಿವರಿಂದ ಮಂಡಿಸಲ್ಪಟ್ಟ ಅಂಕಿ ಅಂಶಗಳÀ ಪ್ರಕಾರ ಕಳೆದ ವರ್ಷ ದಾಖಲಾದ ಕೋಮು ಗಲಭೆಯ ಪ್ರಕರಣಗಳಲ್ಲಿ ಶೇ. 17 ರಷ್ಟು ಹೆಚ್ಚಳವಾಗಿದೆ. ಕೇವಲ ಒಂದು ವರ್ಷದಲ್ಲಿ 751 ಪ್ರಕರಣಗಳು ದಾಖಲಾಗಿವೆ. ಚುನಾವಣಾ ಸಮಯದಲ್ಲಿ ಇಂತಹ ಪ್ರಕರಣಗಳು ಗಣನೀಯವಾಗಿ ಹೆಚ್ಚುವದನ್ನು ಅಂಕಿ ಅಂಶಗಳು ಸೂಚಿಸುತ್ತವೆ. ಅದರಂತೆ 2013ರಲ್ಲಿ ಅತೀ ಹೆಚ್ಚು 823 ಪ್ರಕರಣಗಳು ದಾಖಲಾಗಿವೆ. ರಾಜಕೀಯ ಪ್ರೇರಿತ ಕೋಮು ದ್ವೇಷದ ಬೆಂಕಿಯು ಭದ್ರ ಸಾಮಾಜಿಕ ಚೌಕಟ್ಟನ್ನು ಶಿಥಿಲಗೊಳಿಸುತ್ತಿದೆ ಹಾಗೂ ಪರಂಪರಾಗತ ಸಾಮಾಜಿಕ ಆಚರಣೆಗಳÀು, ಸಹಿಷ್ಣುತೆ, ಸಹೋದರತೆಗಳನ್ನು ನಾಶಪಡಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅಬ್ದುಲ್ ರೆಹಮಾನ್ ಶಾಂತಿ, ನೆಮ್ಮದಿ ಇಲ್ಲದ ಮತ್ತುó ಛಿದ್ರ ಸಮಾಜ ಎಂದಿಗೂ ಆರ್ಥಿಕ ಪ್ರಗತಿ ಸಾಧಿಸಲಾರದು ಎಂದು ಅಭಿಪ್ರಾಯ ಪಟ್ಟರು. ಇದು ವ್ಯಾಪಕವಾದರೆ ದೇಶಕ್ಕೆ ಹರಿದು ಬರುವ ವಿದೇಶಿ ಬಂಡವಾಳ ನಿಂತು ಬಿಡಬಹುದು, ಮಾತ್ರವಲ್ಲ ದೇಶದ ಹೂಡಿಕೆದಾರರೇ ಬಂಡವಾಳ ಹೂಡಲು ವಿದೇಶದಲ್ಲಿ ಅವಕಾಶ ವನ್ನು ಹುಡುಕಬಹುದು. ಪ್ರಸಕ್ತ ಆರ್ಥಿಕ ಚಟುವಟಿಕೆಗಳು, ವ್ಯಾಪಾರ, ಉದ್ದಿಮೆಗಳು ನಷ್ಟ ಹೊಂದಿ ಆರ್ಥಿಕ ಕುಸಿತ, ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಸಮಾಜದಲ್ಲಿ ಶಾಂತಿ ಸೌಹಾರ್ಧತೆಯನ್ನು ಪುನರ್ ಸ್ಥಾಪಿಸಿಬೇಕೆನ್ನುವ ಉದ್ದೇಶದಿಂದ ರಾಷ್ಟ್ರವ್ಯಾಪಿ ತಾ. 21 ರಿಂದ ಸೆ. 4 ರವರೆಗೆ ಶಾಂತಿ ಮತ್ತು ಮಾನವೀಯತೆ ಅಭಿಯಾನವನ್ನು ಹಮ್ಮಿಕೊಂಡಿರುವದಾಗಿ ಅಬ್ದುಲ್ ರೆಹಮಾನ್ ತಿಳಿಸಿದರು. ತಾ. 21 ರಂದು (ಇಂದು) ಬೆಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಕೊಡಗು ಜಿಲ್ಲೆಯಲ್ಲೂ ಶಾಂತಿಯ ನೆಲಗಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ವಿವಿಧ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗುವದು. ವೈಯಕ್ತಿಕ ಭೇಟಿ, ಜನಪ್ರತಿನಿಧಿಗಳ ಭೇಟಿ, ದುಂಡು ಮೇಜಿನ ಸಮಾಲೋಚನೆ ಸೇರಿದಂತೆ ಅನೇಕ ಸೌಹಾರ್ದತೆಯ ಸಭೆಗಳನ್ನು ನಡೆಸಲಾಗುವದು ಎಂದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಮಡಿಕೇರಿ ಸಿಎಸ್ಐ ಚರ್ಚ್ನ ರೆವರೆಂಡ್ ಫಾದರ್ ಸಂದೀಪ್ ರಾಬಿನ್ಸನ್ ಆನಂದ ಹಾಗೂ ಮಡಿಕೇರಿಯ ಮಕ್ಕಾ ಮಸೀದಿಯ ಖದೀಬರಾದ ಮೌಲವಿ ಅಬ್ದುಲ್ ಹಕೀಂ ಗೌರವ ಅಧ್ಯಕ್ಷರು ಗಳಾಗಿರುತ್ತಾರೆ. ಹಿರಿಯ ಸಾಹಿತಿ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ, ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಕೆ.ಎಂ. ಲೋಕೇಶ್ ಸಾಗರ್ ಸೇರಿದಂತೆ ಅನೇಕರು ಸದಸ್ಯರುಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅಬ್ದುಲ್ ರೆಹಮಾನ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಸಿ.ಹೆಚ್. ಅಫ್ಸರ್ ಹಾಗೂ ಡಿ.ಹೆಚ್. ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.