ಮಡಿಕೇರಿ, ಅ.30 : ಟಿಪ್ಪು ಸುಲ್ತಾನ್ ಒಬ್ಬ ಮಹಾನ್ ವ್ಯಕ್ತಿಯಾಗಿದ್ದು, ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕೀಯ ಬೆರೆತಿರುವದು ದುರದೃಷ್ಟಕರವೆಂದು ಅಭಿಪ್ರಾಯಪಟ್ಟಿರುವ ಉಲಮಾ ಒಕ್ಕೂಟವಾದ ಸಮಸ್ತ ಕೊಡಗು ಜಂಇಯ್ಯತ್ತುಲ್ ಉಲಮಾ ಜಿಲ್ಲೆಯ ಜನತೆ ಅಪಪ್ರಚಾರಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಲಮಾದ ಜಿಲ್ಲಾ ಸದಸ್ಯ ಎಂ.ವೈ. ಅಶ್ರಫ್ ಫೈಝಿ, ಟಿಪ್ಪು ಜಯಂತಿ ಆಚರಣೆ ಸಂದರ್ಭ ಕಳೆದ ಬಾರಿ ನಡೆದ ಅಹಿತಕರ ಘಟನೆಗಳು ಮರುಕಳಿಸದಂತೆ ಜಿಲ್ಲೆಯ ಪ್ರಜ್ಞಾವಂತರು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಶಾಂತಿ ಸೌಹಾರ್ದತೆಯಿಂದ ಜೀವನ ಸಾಗಿಸುವ ಇತಿಹಾಸ ಕೊಡಗು ಜಿಲ್ಲೆಗಿದ್ದು, ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜನ ಸಾಮಾನ್ಯರ ಹಿತವನ್ನು ಕಾಪಾಡಲು ಎಲ್ಲರೂ ಪ್ರಯತ್ನಿಸ ಬೆÉೀಕೆಂದರು.

ತ್ರಿವಳಿ ತಲಾಖ್ ಮತ್ತು ಏಕರೂಪ ನಾಗರಿಕ ಸಂಹಿತೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿದ ಅವರು ಕೇಂದ್ರದ ಕ್ರಮವನ್ನು ವಿರೋಧಿಸಿ ನ.4 ರಂದು ಮಲಪ್ಪುರಂ ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಮಂದಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಲಿದ್ದಾರೆ ಎಂದರು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದ ಪ್ರಜೆಗಳಿಗೆ ಸಂವಿಧಾನದಲ್ಲಿ ಆಯಾ ಜನಾಂಗದ ಧರ್ಮವನ್ನು ಅನುಸರಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಜನರ ದಾರಿ ತಪ್ಪಿಸುವ ಯತ್ನ ಮಾಡುತ್ತಿರುವದು ಉತ್ತಮ ಬೆಳವಣಿಗೆಯಲ್ಲವೆಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಉಲಮಾದ ಜಿಲ್ಲಾಧ್ಯಕ್ಷ ಎಂ.ಎಂ. ಅಬ್ದುಲ್ ಫೈಝಿ, ಸಹ ಕಾರ್ಯದರ್ಶಿ ವೈ.ಎಂ. ಉಮ್ಮರ್ ಪೈಝಿ, ಕಾರ್ಯದರ್ಶಿ ಅಬ್ದುಲ್ ರೆಹೆಮಾನ್ ಮುಸ್ಲಿಯಾರ್, ಉಪಾಧ್ಯಕ್ಷ ಉಸ್ಮಾನ್ ಫೈಝಿ ಹಾಗೂ ಸದಸ್ಯ ಹ್ಯಾರಿಸ್ ಮುಸ್ಲಿಯಾರ್ ಉಪಸ್ಥಿತರಿದ್ದರು.