ಸೋಮವಾರಪೇಟೆ,ಜ.15: ತಾಲೂಕಿನ ಇತಿಹಾಸ ಪ್ರಸಿದ್ಧ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು, ತಾ. 16ರಂದು (ಇಂದು) 58ನೇ ಮಹಾರಥೋತ್ಸವ ಜರುಗಲಿದೆ. ಕಳೆದ ತಾ. 13ರಿಂದಲೇ ಪ್ರಸಕ್ತ ಸಾಲಿನ ಜಾತ್ರೋತ್ಸವ ಪ್ರಾರಂಭವಾಗಿದ್ದು, ತಾ. 17ರಂದು ಸಮಾರೋಪ ನಡೆಯಲಿದೆ.ತಾಲೂಕಿನ ಶಾಂತಳ್ಳಿ ಹೋಬಳಿಗೆ ಒಳಪಡುವ ಕೂತಿನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತಾರೆ ಶೆಟ್ಟಳ್ಳಿ ಗ್ರಾಮಸ್ಥರು ವಿಶೇಷವಾಗಿ ಆಚರಿಸಲ್ಪಡುವ ಕುಮಾರಲಿಂಗೇಶ್ವರ ಜಾತ್ರೋತ್ಸವದಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಭಕ್ತಾದಿಗಳು ಭಾಗವಹಿಸುತ್ತಿದ್ದಾರೆ. ಮಹಾ ರಥೋತ್ಸವ ತಾ. 16ರಂದು ನಡೆಯಲಿದ್ದು, ಸಾವಿರಾರು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ.

ತಾ. 13ರಿಂದಲೇ ಜಾತ್ರೆ ಪ್ರಾರಂಭಗೊಂಡಿದ್ದು ನಿನ್ನೆ ಮಕರ ಸಂಕ್ರಮಣ ಕರುವಿನ ಹಬ್ಬ ನಡೆದು ಇಂದು ಅರಸುಬಲ ಸೇವೆ ನೆರವೇರಿತು. ಕೂತಿನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ವ್ಯಾಪ್ತಿಯ ಭಕ್ತಾದಿಗಳು ಸಾಮೂಹಿಕವಾಗಿ ದೇವಾಲಯಕ್ಕೆ ಆಗಮಿಸಿ ಪ್ರದಕ್ಷಿಣೆ ನಂತರ ಫಲ ತಾಂಬೂಲ, ಧವಸ ಧಾನ್ಯ, ಕಾಣಿಕೆ ಹರಕೆ ಸಲ್ಲಿಸಿದರು.

ತಾ. 16ರಂದು (ಇಂದು) ಮಧ್ಯಾಹ್ನ 12.05 ಗಂಟೆಗೆ ಕುಮಾರಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ ಜರುಗಲಿದೆ. ದೇವಾಲಯದಿಂದ ಗ್ರಾಮದ ಮುಖ್ಯಮಾರ್ಗದ ರಥಬೀದಿಯಲ್ಲಿ ರಥ ತೆರಳಲಿದೆ. ಮಧ್ಯಾಹ್ನ 12.10ರಿಂದ 2.30ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಂಜೆ 6 ಗಂಟೆಗೆ ‘ಮುದುಕನ ಮದುವೆ’ ಎಂಬ ಹಾಸ್ಯ ನಾಟಕ, 7 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ತಾ. 17ರಂದು ಮಹಾ ಸಂಪ್ರೋಕ್ಷಣೆ ವಿಧಿವಿಧಾನಗಳು, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಸುಧಾ ಬರಗೂರು ಮತ್ತು ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ.

ತಾ. 17ರಂದು ಅಪರಾಹ್ನ 2 ಗಂಟೆಗೆ ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಲೋಕಾಸಭಾ ಸದಸ್ಯರಾದ ಪ್ರತಾಪ್ ಸಿಂಹ ಸೇರಿದಂತೆ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಜಾತ್ರೋತ್ಸವ ಅಂಗವಾಗಿ ಶಾಂತಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಅಂತರ ಜಿಲ್ಲಾ ಮಟ್ಟದ ಕ್ರೀಡಾಕೂಟ ಪ್ರಾರಂಭವಾಗಿದೆ. ಪುರುಷರ ವಿಭಾಗದಲ್ಲಿ ಕಬಡ್ಡಿ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾಟಗಳು ಆಯೋಜಿಸಲಾಗಿದೆ. ಕ್ರೀಡಾಕೂಟ ತಾ. 16ರಂದು ಮುಂದುವರೆಯಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.