ಸೋಮವಾರಪೇಟೆ, ಅ. 5: ತಾಲೂಕಿನ ಶಾಂತಳ್ಳಿ ಗ್ರಾಮದ ಬೆಟ್ಟದಳ್ಳಿಯಲ್ಲಿರುವ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯ ವತಿಯಿಂದ ಪ್ರಾರಂಭಗೊಂಡಿರುವ ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಗೆ ಮೂಲತಃ ಹರಪಳ್ಳಿಯ, ಪ್ರಸ್ತುತ ಬೆಂಗಳೂರಿನ ಎಂಬೆಸ್ಸಿ ಗ್ರೂಪ್ನ ವೈಸ್ ಚೇರ್ಮೆನ್ ಆಗಿರುವ ಹರಪಳ್ಳಿ ರವೀಂದ್ರ ಅವರು ರೂ. 25 ಲಕ್ಷ ಧನಸಹಾಯ ನೀಡಿದ್ದಾರೆ.
ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರವೀಂದ್ರ ಅವರು ಧನ ಸಹಾಯದ ಚೆಕ್ಕನ್ನು ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ನೀಡಿದರು.
ತಾಲೂಕಿನ ವಿವಿಧ ಶಾಲೆಗಳ ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ಕಳೆದ ಹಲವು ವರ್ಷಗಳಿಂದ ವಿತರಿಸುತ್ತಾ, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚುತ್ತಿರುವ ರವೀಂದ್ರ ಅವರು, ಬೆಟ್ಟದಳ್ಳಿಯ ಶಾಲೆಗೆ ರೂ. 25 ಲಕ್ಷ ಹಣವನ್ನು ಒದಗಿಸಿರುವದು ಈ ಭಾಗದ ಜನತೆಯ ಅದೃಷ್ಟವಾಗಿದೆ.
ಗ್ರಾಮೀಣ ಭಾಗದಲ್ಲಿಯೂ ಉತ್ತಮ ಶಿಕ್ಷಣ ನೀಡಬೇಕು. ಕುಗ್ರಾಮಗಳಲ್ಲಿರುವ ಯಾವೊಬ್ಬ ಮಕ್ಕಳೂ ಸಹ ಶಿಕ್ಷಣದಿಂದ ವಂಚಿತರಾಗಬಾರದು. ಆಂಗ್ಲ ಮಾಧ್ಯಮ ಶಿಕ್ಷಣವೂ ಗ್ರಾಮೀಣ ಭಾಗದಲ್ಲಿ ದೊರೆಯಬೇಕು ಎಂಬ ಸದುದ್ದೇಶದಿಂದ ಶಾಲೆಯ ಏಳಿಗೆಗೆ ಶ್ರಮಿಸುತ್ತಿರುವದಾಗಿ ಹರಪಳ್ಳಿ ರವೀಂದ್ರ ಈ ಸಂದರ್ಭ ಅಭಿಪ್ರಾಯಿಸಿದರು. ಶಾಲೆಗೆ ರೂ. 25 ಲಕ್ಷ ಧನ ಸಹಾಯ ನೀಡಿದ, ಪ್ರತಿಷ್ಠಿತ ಎಂಬೆಸ್ಸಿ ಗ್ರೂಪ್ನ ಚೇರ್ಮೆನ್ ಅವಾರ್ಡ್ ಪ್ರಶಸ್ತಿಯನ್ನೂ ಪಡೆದಿರುವ ಹರಪಳ್ಳಿ ರವೀಂದ್ರ ಅವರನ್ನು ಇದೇ ಸಂದರ್ಭ ಶ್ರೀ ಕುಮಾರಲಿಂಗೇಶ್ವರ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿನಂದಿಸಿದರು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ, ಕಾರ್ಯದರ್ಶಿ ಕೆ.ಎಸ್. ಸುಂದರ್, ಬಾತ್ಮೀದಾರ ಉದಯಕುಮಾರ್, ಖಜಾಂಚಿ ಎ.ಕೆ. ಮಾಚಯ್ಯ, ನಿರ್ದೇಶಕ ಕೆ.ಕೆ. ಗೋಪಾಲ್, ಎಸ್.ಜಿ. ಮೇದಪ್ಪ, ವೀರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.